ಸುದ್ದಿ ಸಂಗ್ರಹ ಶಹಾಬಾದ್
ನಗರದ ಜೀನಿಯಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಸಂಭ್ರಮ, ಸಡಗರದಿಂದ ನಡೆಯಿತು. ಇಂದಿನ ಧಾವಂತ ಯುಗದಲ್ಲಿ ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಕುಟುಂಬ ಮೌಲ್ಯಗಳು ಮಕ್ಕಳಲ್ಲಿ ಬಾಲ್ಯದಲ್ಲೆ ಬಿತ್ತಿ ಬೆಳೆಸುವ ಉದ್ದೇಶದಿಂದ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ಶಾಲೆಯ ಪುಟ್ಟ ಕಂದಮ್ಮಗಳು ‘ಅವಿಭಕ್ತ ಕುಟುಂಬ’ದ ವಿಶಿಷ್ಟ ಮಾದರಿಯ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.
ಮಕ್ಕಳು ಅಜ್ಜ, ಅಜ್ಜಿ, ತಂದೆ, ತಾಯಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅಣ್ಣ- ತಂಗಿಯರ ಸಾಂಪ್ರದಾಯಿಕ ಉಡುಪುಗಳು ತೊಟ್ಟು, ಅವರ ನಡವಳಿಕೆ ಹಾಗೂ ಪಾತ್ರಗಳನ್ನು ಅಭಿನಯಿಸುವ ಮೂಲಕ ಭಾರತೀಯ ಅವಿಭಕ್ತ ಕುಟುಂಬದ ಪ್ರೀತಿ, ಸಾಮರಸ್ಯ ಮತ್ತು ಬಾಂಧವ್ಯದ ಸೌಂದರ್ಯವನ್ನು ವೇದಿಕೆಯ ಮೇಲೆ ಜೀವಂತವಾಗಿರಿಸಿದರು. ಮಕ್ಕಳ ಮುಗ್ಧ ಅಭಿನಯ ಮತ್ತು ತೊದಲು ನುಡಿಗಳು ನೆರೆದಿದ್ದ ಪೋಷಕರು ಮತ್ತು ಸಾರ್ವಜನಿಕರ ಮನ ಗೆದ್ದವು.
ಡಾ.ಮಲ್ಲಿನಾ ಮಾತನಾಡಿ, ಇಂದಿನ ವಿಭಕ್ತ ಕುಟುಂಬಗಳ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯ ಮಹತ್ವ, ಹಿರಿಯರ ಮೇಲಿನ ಗೌರವ ಮತ್ತು ಒಗ್ಗಟ್ಟಿನ ಶಕ್ತಿ ತಿಳಿಸಿಕೊಡುವುದು ಅಗತ್ಯವಾಗಿದೆ. ಇಂತಹ ವೇಷಭೂಷಣ ಸ್ಪರ್ಧೆಗಳು ಮಕ್ಕಳಲ್ಲಿ ಸಂಸ್ಕಾರ ಮತ್ತು ಸಾಂಸ್ಕೃತಿಕ ಅರಿವು ಮೂಡಿಸಲು ನೆರವಾಗುತ್ತವೆ ಎಂದರು.
ಪತ್ರಕರ್ತರ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಅಬ್ದುಲ್ ಸಾಬೀರ ಬಾರಿ, ಸಂಸ್ಥೆಯ ಮುಖ್ಯಸ್ಥೆ ಅಲ್ಮಾಸ್ ಬಾನು ಮಾತನಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಲಾಯಿತು. ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು. ಈ ವೇಳೆ ಶಾಲೆಯ ಮುಖ್ಯಸ್ಥರು, ಶಿಕ್ಷಕ ವೃಂದ, ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದು,
ಈ ಸಂದರ್ಭದಲ್ಲಿ ಪತ್ರಕರ್ತ ಶಿವಕುಮಾರ ಕುಸಾಳೆ, ಮುಖಂಡರಾದ ಖಾಜಾ ಪಟೇಲ, ಸೈಯದ ಸಾದಕ, ಖರೀಮ ಸಾಬ್, ಸೈಯದ ಸಾಬೀರ ಬಾರಿ, ರಶೀದ ಪಟೇಲ್ ಸೇರಿದಂತೆ ಅನೇಕರು ಇದ್ದರು.
ಶಾಲಿನಿ ಸ್ವಾಗತಿಸಿದರು, ಜೀನಿಸ ಶಾಲೆಯ ಅಧ್ಯಕ್ಷ ಮಹ್ಮದ ತಬರೇಸ್ ವಂದಿಸಿದರು.