ದೇಹದ ಸದೃಢತೆಗೆ ಮಾನಸಿಕ ಆರೋಗ್ಯ ಮುಖ್ಯ: ಶಾಂತಾ ಜಕಾತಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಶಹಾಬಾದ್
ಅನವಶ್ಯ ವಿಚಾರಗಳು ಮನುಷ್ಯನ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ. ದೇಹದ ಸದೃಢತೆಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯ ಎಂದು ಜೀಮ್ಸ್ ಆಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕಿ ಶಾಂತಾ ಜಕಾತಿ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜೀಮ್ಸ್ ಆಸ್ಪತ್ರೆ ವತಿಯಿಂದ ನಡೆದ ‘ವಿಶ್ವ ಮೆದುಳು ದಿನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶಾಲಾ ಕಾಲೇಜು ಮತ್ತು ಸಾರ್ವಜನಿಕರಲ್ಲಿ ಮೆದುಳಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಮರೆವು, ಮೂರ್ಛೆ, ಪಾರ್ಶ್ಶ್ವವಾಯು ನಂತಹ ರೋಗಗಳು ಇಂದು ಸಾಮಾನ್ಯವಾಗಿವೆ. ಯುವಕರಲ್ಲಿ ಇತ್ತೀಚಿಗೆ ಇಂತಹ ಸಮಸ್ಯೆಗಳು ಬರುತ್ತಿದೆ. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಉತ್ತಮ ಪೌಷ್ಟಿಕ ಆಹಾರ, ನಿಯಮಿತ ಆರೋಗ್ಯ, ಯೋಗ, ಧ್ಯಾನದ ಅವಶ್ಯಕತೆ ಇದೆ. ಹೀಗಾಗಿ ಎಲ್ಲರೂ ತಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಂಡು ಮುಂದಾಗುವ ಅಪಾಯಗಳು ತಡೆಗಟ್ಟಿ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಆರೋಗ್ಯವೇ ಭಾಗ್ಯ. ಎಷ್ಟು ಸಂಪತ್ತು ಇದ್ದರೂ ಅದನ್ನು ಅನುಭವಿಸಲು ಉತ್ತಮ ಆರೋಗ್ಯ ಇರದಿದ್ದರೆ ಎಲ್ಲವೂ ವ್ಯರ್ಥ ಎಂದರು.

ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

ಮಕ್ಕಳಿಗೆ ವಿಷಯವನ್ನು ಚಟುವಟಿಕೆಗಳ ಮೂಲಕ ಮಾಡಿಸಿ ಉತ್ತಮ ಸಾಮಾರ್ಥ್ಯ ತೋರಿದ ಭಾಗ್ಯಶ್ರೀ, ಅಂಜಲಿ ಮತ್ತು ಶರಣ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿಭಾಗದ ಮುಖ್ಯಗುರುಗಳು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *