ಸುದ್ದಿ ಸಂಗ್ರಹ ಕಲಬುರಗಿ
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಸ್ನೇಹಿತರಿಗೆ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ.
ಕಲಬುರಗಿ ನಗರದ ನಾಗೇಶ ಅಲಿಯಾಸ್ ಬಾಬು ರಾಠೋಡಗೆ (30) 25 ವರ್ಷ ಜೈಲು ಮತ್ತು 45 ಸಾವಿರ ದಂಡ ವಿಧಿಸಿದೆ. ಶಿವರಾಜ ಅಲಿಯಾಸ್ ಸುರಜ್ಯಾ ಹೊನಗುಂಟಿ (20) ಮತ್ತು ಕಾಳಗಿ ತಾಲೂಕಿನ ಕಲಗುರ್ತಿಯ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲು ಶ್ರೀನವರ (19) ಎಂಬುವವರಿಗೆ ಮೂರು ವರ್ಷ ಜೈಲು ಮತ್ತು ತಲಾ 55 ಸಾವಿರ ದಂಡ ವಿಧಿಸಿದೆ.
ನಾಗೇಶನಿಗೆ ಬಾಲಕಿಯ ಕುಟುಂಬದೊಂದಿಗೆ ಸಲುಗೆ ಇತ್ತು. ಪ್ರೀತಿಸುವುದಾಗಿ ನಂಬಿಸಿ, ಬಾಲಕಿಯನ್ನು ಪುಸಲಾಯಿಸಿ 2025ರ ಮಾರ್ಚ್–ಏಪ್ರಿಲ್‌ನಲ್ಲಿ ಮೂರು ಬಾರಿ ಅತ್ಯಾಚಾರ ನಡೆಸಿದ್ದ ಬಳಿಕ ಆತ ಈ ವಿಷಯವನ್ನು ಸ್ನೇಹಿತ ಶಿವರಾಜನಿಗೆ ತಿಳಿಸಿದ್ದ. ಅದರಿಂದ ಪ್ರೇರಿತನಾಗಿ ಶಿವರಾಜ, ನಾಗೇಶನ ಜೊತೆಗೆ ಲೈಂಗಿಕವಾಗಿ ಸಹಕರಿಸಿದಂತೆ ತನ್ನೊಂದಿಗೂ ಸಹಕರಿಸಬೇಕು ಎಂದು ಬೆದರಿಸಿ 2025ರ ಏಪ್ರಿಲ್‌ನಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಇಬ್ಬರೂ ತಮ್ಮ ಕೃತ್ಯಗಳ ಕುರಿತು ಮತ್ತೊಬ್ಬ ಸ್ನೇಹಿತ ಮಲ್ಲಿಕಾರ್ಜುನನಿಗೆ ತಿಳಿಸಿದ್ದರು. ಆತ ಲೈಂಗಿಕ ದೌರ್ಜನ್ಯದ ಉದ್ದೇಶದಿಂದ 2025ರ ಏಪ್ರಿಲ್‌ನಲ್ಲಿ ಬಾಲಕಿಯನ್ನು ಅಪಹರಿಸಿ ಕರೆದೊಯ್ದಿದ್ದ..
ಈ ಸಂಬಂಧ ಕಲಬುರಗಿಯ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿಂದಿನ ಇನ್‌ಸ್ಪೆಕ್ಟರ್ ರಾಘವೇಂದ್ರ ಈ ಮೂವರ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಕವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಲ್ ಚವ್ಹಾಣ ಶಿಕ್ಷೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ನಾಗೇಶ ಪ್ರಕರಣದಲ್ಲಿ 5 ಲಕ್ಷ ಮತ್ತು ಇನ್ನುಳಿದ ಎರಡು ಪ್ರಕರಣಗಳಲ್ಲಿ ತಲಾ 50 ಸಾವಿರ ಸೇರಿ ಒಟ್ಟು 6 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ವಾದ ಮಂಡಿಸಿದ್ದರು.