ಸುದ್ದಿ ಸಂಗ್ರಹ ಚಿತ್ತಾಪುರ
ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅಗತ್ಯ ರಸಗೊಬ್ಬರ ಪೂರೈಕೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಹೇಳಿದ್ದಾರೆ.
ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಬಿತ್ತನೆಗೆ ರೈತರು ತರಾತುರಿ ಮಾಡಬಾರದು. ಮುಂಗಾರು ಮಳೆಗಾಲ ಶುರುವಾಗಲು ಇನ್ನೂ ಒಂದು ವಾರ ಬಾಕಿಯಿದ್ದು, ಅದಕ್ಕೂ ಮುಂಚೆ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಪರಿಕರ ಮಾರಾಟ ಮಾಡುವ ಮಳಿಗೆಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಖರೀದಿಸಬಾರದು ಎಂದು ಕೋರಿದ್ದಾರೆ.
ರಸಗೊಬ್ಬರ ಸಿಗುತ್ತದೆಯೋ ಇಲ್ಲವೋ ಎಂದು ತಾಲೂಕಿನ ರೈತರು ಬೇರೆ ತಾಲೂಕು, ದೂರದ ನಗರ- ಪಟ್ಟಣಗಳಿಗೆ ಹೋಗಿ ಹೆಚ್ಚಿನ ಬೆಲೆಗೆ ರಸಗೊಬ್ಬರ ಖರೀದಿಸಬಾರದು. ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸಲು ಕೃಷಿ ಇಲಾಖೆಯೂ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ರೈತರು ರಸಗೊಬ್ಬರಕ್ಕೆ ಯಾವುದೆ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.