ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ‌‌

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಂದಿಕೂರ ಬಳಿಯಿರುವ ಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಭೂಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡಿದ್ದಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಾರನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ. ಬಳಿಕ ಪರಿಹಾರ ವಿತರಣೆ ಭರವಸೆ ಬಳಿಕ ಕಾರನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಕೋರ್ಟ್‌ನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ
ಕೆ.ಎಸ್ ರೊಟ್ಟೇರ್ ಅವರು ಭೂಸ್ವಾಧೀನ ಪರಿಹಾರ ವಿಳಂಬ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಾರು (ಕೆಎ 32 ಜಿ 9990) ಜಪ್ತಿ ಮಾಡುವಂತೆ ಆದೇಶಿಸಿದ್ದರು.

ಬೇಲೀಫ್‌ಗಳು ಜಿಲ್ಲಾಧಿಕಾರಿ ಕಾರು ಜಪ್ತಿಗೆ ಮುಂದಾಗಿದ್ದ ವೇಳೆ ಚಾಲಕ ವಾಹನದ ಕೀ ಕೊಡದೆ ಸತಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಬೇಲೀಫ್‌ಗಳು ಟೋಯಿಂಗ್ ವಾಹನ ತರಿಸಿ ಜಿಲ್ಲಾಧಿಕಾರಿ ಕಾರು ಎಳೆದೊಯ್ಯಲು ಯತ್ನಿಸಿದಾಗ ಮತ್ತೆ ಕಾರಿನ ಕೀ ಕೊಟ್ಟಿದ್ದಾರೆ. ಸುದ್ದಿ ತಿಳಿದು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ ಸಾಹಿತ್ಯ ಅಲದಕಟ್ಟಿ ಸ್ಥಳಕ್ಕೆ ಧಾವಿಸಿ ವಕೀಲರ ಮನವೊಲಿಸಲು ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ‌.

ಏನಿದು ಪ್ರಕರಣ ? 20 ವರ್ಷಗಳ ಹಿಂದಿನ ಪ್ರಕರಣ
2005ರಲ್ಲಿ ನಂದಿಕೂರ ಬಳಿ ಎಸ್‌ಟಿಪಿ ಸ್ಥಾಪನೆಗೆ ಹಲವು ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಪ್ರಕಾಶ ಮಲಕಪ್ಪ ಎಂಬುವರ 2 ಎಕರೆ ಜಮೀನು ಕಳೆದುಕೊಂಡಿದ್ದರು. ಅದಕ್ಕೆ ಆಗಿನ ಉಪ ವಿಭಾಗಾಧಿಕಾರಿಯಿಂದ 1 ಲಕ್ಷದಷ್ಟು ಮಾತ್ರ ಪರಿಹಾರ ನೀಡಲಾಗಿತ್ತು.

ಇದನ್ನು ಪ್ರಶ್ನಿಸಿ ಪ್ರಕಾಶ ಮಲಕಪ್ಪ (ಪ್ರಕರಣ ಸಂಖ್ಯೆ 59/19) ಅವರು ಕೋರ್ಟ್ ಮೆಟ್ಟಿಲೇರಿದ್ದರು. 2 ಎಕರೆ ಜಮೀನಿಗೆ 6 ಕೋಟಿ ಪರಿಹಾರ ನೀಡುವಂತ ಕೋರ್ಟ್ ಆದೇಶಿಸಿತ್ತು. ಆದರೂ ಇಲ್ಲಿತನಕ ರೈತನಿಗೆ ಪರಿಹಾರ ಸಿಕ್ಕಿರಲಿಲ್ಲ, ‌‌

ಆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ರೋಟ್ಟೇರ್ ಅವರು ಜಿಲ್ಲಾಧಿಕಾರಿ ಕಾರು ಜಪ್ತಿಗೆ ಆದೇಶಿಸಿದ್ದರು. ಪ್ರಕಾಶ ಮಲಕಪ್ಪ ಪರವಾಗಿ ವಕೀಲ ಎಂ.ಎನ್.ಪಾಟೀಲ ವಾದ ಮಂಡಿಸಿದ್ದರು.

ಷರತ್ತುಬದ್ಧವಾಗಿ ಕಾರು ಬಿಡುಗಡೆ
“ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಮಾರ್ಚ್ 12ರೊಳಗೆ ಕ್ರಮವಹಿಸಬೇಕು’ ಎಂದು ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾರು ಜಪ್ತಿಗೆ ಅಸಹಕಾರ ತೋರಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಕೋರ್ಟ್ ಆದೇಶದಂತೆ ವಾಹನಗಳ ಜಪ್ತಿಗೆ ಬರುವ ಬೇಲೀಫ್‌ ಗಳಿಗೆ ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಬಳಿಕ ಷರತ್ತು ಬದ್ಧವಾಗಿ ಕಾರು ಬಿಡುಗಡೆ ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *