ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ಬಹುಮಾನ: ಸಿಎಂ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂ. ನಗದು ಬಹುಮಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಡಿ.21 ರವಿವಾರ ಒಲಂಪಿಕ್ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿಗೆ ಭಾಜನರಾಗಿರುವ ಕ್ರೀಡಾ ಸಾಧಕರಿಗೆ ಅಭಿನಂದನೆಗಳು. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂ.ಗಳ ನಗದು ಬಹುಮಾನ ನೀಡಲಾಗುವುದು. ಬೆಳ್ಳಿ ಪದಕ ಪಡೆದರೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಗೆದ್ದರೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುವುದು. ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

1958ರಲ್ಲಿ ಪ್ರಾರಂಭವಾದ ಒಲಂಪಿಕ್ಸ್ ಸಂಸ್ಥೆ ಇಲ್ಲಿಯವರೆಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರು ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡ ನಂತರ ಸಂಸ್ಥೆಯು ಹೆಚ್ಚು ಕ್ರಿಯಾಶೀಲವಾಗಿದೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನಾನೆ ನೆರವೇರಿಸಿದ್ದೆನೆ. ಇಡಿ ದೇಶದಲ್ಲಿಯೆ ಆಂಧ್ರ ಮತ್ತು ಕೇರಳ ರಾಜ್ಯದಂತೆ ಕರ್ನಾಟಕದಲ್ಲಿಯೂ ಸಂಸ್ಥೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ನಮ್ಮ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕಠಿಣ ಪರಿಶ್ರಮ ಹಾಗೂ ಗುರಿಸಾಧನೆ ಮಾಡುವ ಛಲವಿದ್ದರೆ, ಕರ್ನಾಟಕದ ಕ್ರೀಡಾಪಟು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬಹುದಾಗಿದೆ. ಕರ್ನಾಟಕದ ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವರೆಂಬ ವಿಶ್ವಾಸವಿದೆ. ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಅತ್ಯಂತ ಅವಶ್ಯಕ. ಗುರಿಸಾಧನೆ ಜೀವನದ ಧ್ಯೇಯವಾಗಬೇಕು. ಕ್ರೀಡಾಪಟುಗಳಿಗೆ ಸರ್ಕಾರದ ನೇಮಕಾತಿಯಲ್ಲಿಯೂ ಮೀಸಲಾತಿಯನ್ನು ಒದಗಿಸಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು ಹಾಗೂ ಇನ್ನುಳಿದ ಇಲಾಖೆಗಳಲ್ಲಿ ಶೇ.2ರಷ್ಟು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು. ಜನವರಿಯಲ್ಲಿ ಕ್ರೀಡಾಮೀಸಲಾತಿಯಡಿಯಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗುತ್ತದೆ. ಆದ್ದರಿಂದ ಹೆಚ್ಚಿನ ಯುವಜನರು ಕ್ರೀಡಾ ಕ್ಷೇತ್ರದಲ್ಲಿ ಭಾಗಿಯಾಗಬೇಕೆಂದು ಹೇಳಿದರು.

Leave a Reply

Your email address will not be published. Required fields are marked *