ಬೆಳಗಾವಿ (ಸುವರ್ಣ ವಿಧಾನಸೌಧ): ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ, ಮುಟ್ಟು ಆದವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ, ತಾರತಮ್ಯ ಮಾಡುವ ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವವರಿಗೆ 5 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಉದ್ದೇಶದಿಂದ ‘ಕರ್ನಾಟಕ ಮಹಿಳಾ ಯೋಗಕ್ಷೇಮ ರಜೆ ಕಾಯ್ದೆ- 2025’ರ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸಿದೆ. ಇಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸೇವೆಗಳಲ್ಲಿ ತೊಡಗಿರುವ ಮಹಿಳೆಯರು ಮುಟ್ಟಾದರೆ, ಆ ಅವಧಿಯಲ್ಲಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಈ ಮಸೂದೆಯನ್ನು ರೂಪಿಸಲಾಗಿದೆ. ಮಸೂದೆಯ ಅನ್ವಯ ಹುಡುಗಿಯರು, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಮುಟ್ಟಿನ ರಜೆ ಪಡೆಯಲು ಅರ್ಹರು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಮುಟ್ಟಿನ ರಜೆಯನ್ನು ಮಂಜೂರು ಮಾಡಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಋತುಚಕ್ರ ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗಲಿದೆ. ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟು 12 ಮುಟ್ಟಿನ ರಜೆ ಪಡೆಯಬಹುದು ಎಂದು ಈ ಆದೇಶದಲ್ಲಿ ವಿವರಿಸಿದೆ. ಈ ಆದೇಶಕ್ಕೆ ಕಾನೂನು ಬಲ ನೀಡಲು ಕಾಯ್ದೆ ರೂಪಿಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.
ಮುಟ್ಟಿನ ಸಮಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಿದರೆ ಮಾತ್ರ ಮುಟ್ಟು ಆದವರು ಮುಟ್ಟಿನ ರಜೆ ಪಡೆಯಬಹುದು. ಆದರೆ ಅದಕ್ಕೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ. ಏಕೆಂದರೆ ವಿಳಂಬ ಆಗಬಹುದು. ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ರಜೆ ನೀಡುವಂತೆ ವಿನಂತಿ ಅಥವಾ ಇ-ಮೇಲ್ ಕಳುಹಿಸಿದರೆ ಸಾಕು. ಮುಟ್ಟಿನ ರಜೆ ಪಡೆಯುವುದನ್ನು ಉನ್ನತ ಅಧಿಕಾರಿಗಳು ಅನಗತ್ಯವಾಗಿ ಪ್ರಚಾರ ಮಾಡಬಾರದು. ಮುಟ್ಟು ಆದವರು ಅರ್ಧ ದಿನ ರಜೆ ಬೇಕಾದರೂ ಪಡೆಯಬಹುದು ಎಂದು ಮಸೂದೆಯಲ್ಲಿದೆ.
ಋತುಸ್ರಾವವನ್ನು ಸುರಕ್ಷಿತ, ಸುಭದ್ರ ಮತ್ತು ಸುಲಭವಾಗಿ ವಿಲೇವಾರಿ ಮಾಡಲು ತ್ಯಾಜ್ಯ ಡಸ್ಟ್ಬಿನ್ಗಳು, ಟಿಶ್ಯೂ ಪೇಪರ್, ಟಾಯ್ಲೆಟ್ ಪೇಪರ್ಗಳು, ಬ್ಯಾಗ್ಗಳು, ಲಕೋಟೆಗಳು, ಪತ್ರಿಕೆಗಳನ್ನು ಒದಗಿಸಬೇಕು. ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ಮತ್ತು ಮುಟ್ಟಿನ ಆರೋಗ್ಯ ಶಿಕ್ಷಣ ಮತ್ತು ನೈರ್ಮಲ್ಯ ಉತ್ಪನ್ನಗಳು, ಋತುಚಕ್ರ ಸ್ನೇಹಿ ಶೌಚಾಲಯಗಳು ಇತ್ಯಾದಿಗಳ ಕುರಿತು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಗಾರಗಳು, ಸಾರ್ವಜನಿಕ ಭಾಷಣಗಳು, ಉಪನ್ಯಾಸಗಳು, ವಿಚಾರ ಸಂಕಿರಣಗಳು, ಚರ್ಚೆಗಳನ್ನು ಆಯೋಜಿಸಲು ಪ್ರತಿ ವರ್ಷ ಮೇ.28 ರಂದು ‘ಮುಟ್ಟಿನ ನೈರ್ಮಲ್ಯ ದಿನ’ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಈ ಮಸೂದೆ ಹೇಳಿದೆ.
ಪ್ರಯೋಜನಗಳೇನು ?
- ಸರ್ಕಾರಿ ಅಥವಾ ಯಾವುದೆ ಖಾಸಗಿ ಸಂಸ್ಥೆಯಲ್ಲಿ ಮುಟ್ಟಿನ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಪಡೆಯಬಹುದು ಮತ್ತು ಕೆಲಸಕ್ಕೆ ಗೈರಾಗಬಹುದು.
- ರವಿವಾರ ಅಥವಾ ಯಾವುದೆ ಇತರ ಸಾಮಾನ್ಯ ರಜಾ ದಿನಗಳಿದ್ದಲ್ಲಿ ಮರುದಿನ ಒಂದು ದಿನದ ಮುಟ್ಟಿನ ರಜೆ ಪಡೆಯಬಹುದು.
- ಇತರ ರಜೆಗಳಲ್ಲಿ (ಸಿಎಲ್, ಇಎಲ್, ಆರ್ಎಸ್ ಇತ್ಯಾದಿ) ದಿನಗಳಲ್ಲಿ ಮುಟ್ಟಾದರೆ, ಯಾವುದೆ ಮುಟ್ಟಿನ ರಜೆ ಪಡೆಯಲು ಅರ್ಹತೆ ಇಲ್ಲ.
- ಮುಟ್ಟಿನ ರಜೆ ಪಡೆಯಲು ಬಯಸದಿದ್ದರೆ ಮನೆಯಿಂದ ಕೆಲಸ ಮಾಡಬಹುದು. ವರ್ಷದಲ್ಲಿ ಮುಟ್ಟಿನ ರಜೆ ದಿನಗಳ ಸಂಖ್ಯೆ 12 ಮೀರಬಾರದು.
- ಮುಟ್ಟಿನ ರಜೆ ಪಡೆಯುವ ಅರ್ಹತೆಯು ಋತುಬಂಧವಾದಾಗ ಅಥವಾ ಉದ್ಯೋಗಿ 52 ವರ್ಷ ವಯಸ್ಸಿನವರಾದಾಗ ಯಾವುದು ಮೊದಲೊ ಆ ದಿನ ಕೊನೆಗೊಳ್ಳಲಿದೆ.
- ಬಳಕೆಯಾಗದ ಮಾಸಿಕ ಮುಟ್ಟಿನ ರಜೆ ಸಂಗ್ರಹ ಆಗುವುದಿಲ್ಲ. ನಂತರದ ತಿಂಗಳುಗಳಿಗೆ ಸೇರಿಸಲು ಕೂಡಾ ಅವಕಾಶ ಇಲ್ಲ.
- ವಿದ್ಯಾರ್ಥಿನಿಯರು ಮುಟ್ಟಾದರೆ ಪ್ರತಿ ತಿಂಗಳು ಎರಡು ದಿನ ರಜೆ ಮತ್ತು ಮುಟ್ಟಿನ ಸಮಸ್ಯೆಗಳಿಗೆ ಹಾಜರಾತಿಯಲ್ಲಿ ಶೇ.2ರಷ್ಟು ವಿನಾಯಿತಿ ನೀಡಬೇಕು.
- ಪ್ರತ್ಯೇಕ ವಿಶ್ರಾಂತಿ ಕೊಠಡಿಗಳಲ್ಲಿ ಜೈವಿಕವಾಗಿ ಕೊಳೆಯುವ ಸ್ಯಾನಿಟರಿ ಪ್ಯಾಡ್ಗಳು, ಮುಟ್ಟಿನ ಕಪ್ಗಳು, ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸಬೇಕು.