ಮದುವೆ ಮಂಟಪದಲ್ಲಿ ವರನಿಗೆ ಚಾಕು ಇರಿತ: ಆರೋಪಿಯನ್ನು 2 ಕಿ.ಮೀ ವರೆಗೆ ಬೆನ್ನಟ್ಟಿದ ವೆಡ್ಡಿಂಗ್‌ ಡ್ರೋನ್‌

ಸುದ್ದಿ ಸಂಗ್ರಹ

ಮುಂಬೈ: ಮದುವೆ ಮಂಟಪದಲ್ಲಿ ವರನಿಗೆ ಚಾಕುವಿನಿಂದ ಇರಿದು ಎಸ್ಕೇಪ್‌ ಆಗುತ್ತಿದ್ದ ವ್ಯಕ್ತಿಯನ್ನು ವೆಡ್ಡಿಂಗ್‌ ಡ್ರೋನ್‌ 2 ಕಿ.ಮೀ ವರೆಗೆ ಬೆನ್ನಟ್ಟಿದ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯ ಮೇಲೆ ವರನಿಗೆ ಮೂರು ಬಾರಿ ಇರಿದು ಪರಾರಿಯಾಗಿದ್ದಾನೆ.

ವೆಡ್ಡಿಂಗ್‌ ಚಿತ್ರೀಕರಿಸುತ್ತಿದ್ದ ವಿಡಿಯೋಗ್ರಾಫರ್ ತಕ್ಷಣವೇ ಕಾರ್ಯಪ್ರವೃತ್ತನಾಗಿ ತನ್ನ ಡ್ರೋನ್ ಮೂಲಕ ದಾಳಿಕೋರನನ್ನು ಬೆನ್ನಟ್ಟಿ, ದಾಳಿಕೋರ ಮತ್ತು ಇನ್ನೊಬ್ಬ ವ್ಯಕ್ತಿ ಬೈಕ್‌ನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುಮಾರು 2 ಕಿ.ಮೀ ವರೆಗೆ ಡ್ರೋನ್‌ ಮೂಲಕ ಬೆನ್ನಟ್ಟಲಾಯಿತು.

ಪೊಲೀಸರು ಡ್ರೋನ್ ದೃಶ್ಯಾವಳಿಗಳನ್ನು ಪಡೆದು ಆರೋಪಿಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಡಿಜೆ ನೃತ್ಯದ ಸಮಯದಲ್ಲಿ ನಡೆದ ಸಣ್ಣ ಜಗಳದಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಗಾಯಗೊಂಡಿರುವ ವರ ಸಜಲ್ ರಾಮ್ ಸಮುದ್ರ (22) ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *