ತೊಗರಿ ಕಾಯಿ ಕೊರಕದ ಸಮಗ್ರ ಹತೋಟಿ ಮಾಡಿ

ಜಿಲ್ಲೆ

ಕಲಬುರಗಿ: ಅಧಿಕ ಮಳೆಯಾಗಿದ್ದರಿಂದ ಕೆಲವೆಡೆ ತೊಗರಿ ಬೆಳೆ ನಾಶವಾಗಿದೆ. ಇನ್ನೂ ಕೆಲವೆಡೆ ಬೆಳೆಗೆ ಗೊಡ್ಡು, ಹಳದಿ ಬಣ್ಣಕ್ಕೆ ತಿರುಗಿರುವುದು, ಕಪ್ಪು ಚುಕ್ಕೆ ರೋಗದ ಜೊತೆಗೆ ಕೀಟಗಳ ಬಾಧೆ ಕಂಡುಬರುತ್ತಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ರೈತರಿಗೆ ಸಲಹೆ ನೀಡಿದರು. 

ಜಿಲ್ಲೆಯ ಸುಂಟನೂರ ಗ್ರಾಮದ ಹೊಲವೊಂದರಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಸಾಯಂಕಾಲ ಜರುಗಿದ ‘ತೊಗರಿ ಬೆಳೆ ಕ್ಷೇತ್ರ ಭೇಟಿ, ವೀಕ್ಷಣೆ ಹಾಗೂ ರೈತರಿಗೆ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಟಗಳ ನಿಯಂತ್ರಣ,  ಪೋಷಕಾಂಶ ನಿರ್ವಹಣೆ, ಪಲ್ಸ್ ಮ್ಯಾಜಿಕ್ ನಂತಹ ಪೋಷಕಾಂಶ ಮಿಶ್ರಣ ಬಳಸಿ ಬೆಳೆಯ ಬೆಳವಣಿಗೆ ಹೆಚ್ಚಿಸಿ, ಹೂವು ಮತ್ತು ಕಾಯಿ ಉದುರುವುದನ್ನು ತಡೆಯಬೇಕು ಎಂದರು.

ಕೀಟ ಮತ್ತು ರೋಗ ನಿರ್ವಹಣೆ

ತೇವಾಂಶ ಕೊರತೆಯಿದ್ದರೆ ಅದನ್ನು ಕಾಪಾಡುವುದು, ರಾಸಾಯನಿಕ ಸಿಂಪಡಣೆಯ ಸಸ್ಯ ಪ್ರಚೋದಕ ನ್ಯಾಪ್ಲಲೀನ್ ಅಸಿಟಿಕ್ ಆಸಿಡ್ (0.5 ಮಿ.ಲೀ./ಲೀಟರ್) ಮತ್ತು ಕಾರ್ಬನ್‌ಡೈಜಿಮ್ ಶಿಲೀಂಧ್ರನಾಶಕ (1 ಗ್ರಾಂ/ಲೀಟರ್) ಬೆರೆಸಿ ಸಿಂಪಡಿಸಬೇಕು. ಕಾಯಿ ಕೊರಕ ನಿಯಂತ್ರಣಕ್ಕೆ ಸೂಕ್ತವಾದ ಕೀಟನಾಶಕವನ್ನು ಇದರೊಂದಿಗೆ ಸೇರಿಸಬಹುದು. ಎಲೆಚುಕ್ಕೆ ರೋಗ ಲಕ್ಷಣಗಳು ಕಂಡುಬಂದ ಕೂಡಲೆ ಕೀಟನಾಶಕ ಸಿಂಪಡಣೆ ಮಾಡಬೇಕು. ಸಂಪೂರ್ಣವಾಗಿ ಹೂ ಬಿಡುವ ಸಮಯದಲ್ಲಿ ಸಿಂಪಡಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಬಂಜೆರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಹತೋಟಿ ಕ್ರಮ ಕೈಗೊಂಡರೆ ಮಾತ್ರ ರೋಗ ನಿರ್ವಹಿಸಬಹುದು. ತಡವಾದರೆ ಯಾವುದೆ ಕ್ರಮದಿಂದಲೂ ರೋಗ ನಿಯಂತ್ರಣ ಸಾಧ್ಯವಿಲ್ಲ. ಬಂಜೆರೋಗ ನಂಜಾಣು ರೋಗವಾಗಿದ್ದು, ಯಾವುದೆ ರಾಸಾಯನಿಕಗಳಿಂದ ಹತೋಟಿ ಮಾಡಲಾಗದು. ಆದರೆ ರೋಗ ಹರಡುವ ಎರಿಯೋಪೈಡ್‌ ಜಾತಿಯ ನುಸಿಗಳನ್ನು ಕ್ರಿಮಿನಾಶ ಸಿಂಪಡಿಸಿ ಹತೋಟಿ ಮಾಡಬಹುದು. ಆದ್ದರಿಂದ ರೈತರು ರೋಗ ಕಾಣಿಸಿಕೊಂಡ ಪ್ರದೇಶದ ಎಲ್ಲಾ ರೈತರು ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು. ರೋಗ ಸೋಂಕಿದ್ದ ಗಿಡಗಳು ಹೂ ಬಿಡುವುದಿಲ್ಲ. ತಡವಾಗಿ ರೋಗ ತಗಲಿದ ಗಿಡಗಳಲ್ಲಿ ಹೂ ಬಿಟ್ಟರೂ ಕಾಯಿ ಕಟ್ಟುವುದಿಲ್ಲ. ಕಾಯಿ ಬಲಿತರೂ ಕಾಳುಗಳ ಬಣ್ಣ ಬದಲಾಗಿ ಜೊಳ್ಳಾಗುವುದು. ತೊಗರಿ ಬೆಳೆಯಲ್ಲಿ ಬಂಜೆರೋಗ ಸಸಿಗಳ ಹಂತದಲ್ಲಿ ಅಂದರೆ 45 ದಿವಸಗಳೊಳಗೆ ಕಾಣಿಸಿಕೊಂಡರೆ ರೋಗ ಪೀಡಿತ ಗಿಡದಲ್ಲಿ ಇಳುವರಿ ಶೇ.95 ರಿಂದ 100ರಷ್ಟು ಕುಂಠಿತವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಮಾಜ ಸೇವಕ ಡಾ.ರಾಜಶೇಖರ ಪಾಟೀಲ್, ಅಸ್ಲಾಂ‌ ಶೇಖ್, ದೌಲತರಾವ್,ಮಲ್ಲಿಕಾರ್ಜುನ, ಶಂಕರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *