ಬೆಂಗಳೂರು: ಸುರಕ್ಷತೆಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರು ನಗರದ ನೀಲಸಂಧ್ರದ ಜಾನ್ಸನ್ ಮಾರ್ಕೆಟ್ ಬಳಿ ನಡೆದಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅನಿಲದ ದುರ್ವಾಸನೆಗೆ ಕಾರ್ಮಿಕರು ಮ್ಯಾನ್‌ಹೋಲ್ ಸಿಲುಕಿ ಅಸ್ವಸ್ಥಗೊಂಡಿದ್ದಾರೆ. ಬಳಿಕ ಹೋಲ್‌ನಲ್ಲಿ ಒದ್ದಾಡುತ್ತಿದ್ದ ಕಾರ್ಮಿಕರನ್ನ ಸ್ಥಳೀಯರು ಮೇಲೆತ್ತಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುತ್ತಮುತ್ತಲಿನವರ ಸಮಯಪ್ರಜ್ಞೆಯಿಂದ ಕಾರ್ಮಿಕರ ಜೀವ ಉಳಿದಿದೆ.
ರಕ್ಷಣೆಗೆ ಬಂದವನೂ ಅಸ್ವಸ್ಥ
ಘಟನೆ ಸಂಬಂಧ ಪ್ರತ್ಯಕ್ಷದರ್ಶಿ ಮೊಹಮ್ಮದ್ ಖಾನ್ ಹೇಳಿಕೆಯಂತೆ ಬೆಳಗ್ಗ 11 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಕಳೆದೆರೆಡು ದಿನಗಳಿಂದ ಡ್ರೈನೇಜ್ ಬ್ಲಾಕ್ ಆಗಿತ್ತು. ಇದರಿಂದ ಜಲಮಂಡಳಿಗೆ ದೂರು ನೀಡಲಾಗಿತ್ತು. ಬೆಳಗ್ಗೆ ಬಂದ ಸಿಬ್ಬಂದಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಮ್ಯಾನ್ ಹೋಲ್‌ನಿಂದ ಬಂದ ಗ್ಯಾಸ್‌ನಿಂದ ಇಬ್ಬರು ಒಳಗೆ ಬಿದ್ದು ಅಸ್ವಸ್ಥರಾಗಿದ್ದಾರೆ. ಅವರನ್ನ ಕಾಪಡಲು ಹೋದ ಮತ್ತೊಬ್ಬರಿಗೂ ಅದೆ ರೀತಿ ಆಗಿದೆ. ಕೂಡಲೇ ಸ್ಥಳೀಯರು ಅವರನ್ನ ರಕ್ಷಣೆ ಮಾಡಿ, ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ ಹೇಳಿದ್ದಾರೆ.
ಸದ್ಯ ಇಬ್ಬರು ಆರೋಗ್ಯವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.