7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ 10 ವರ್ಷ ಜೈಲು: ತೆಲಂಗಾಣ ಕೋರ್ಟ್ ಆದೇಶ

ಸುದ್ದಿ ಸಂಗ್ರಹ

ಹೈದರಾಬಾದ್: 7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ ತೆಲಂಗಾಣ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಸುದೀರ್ಘ ವಿಚಾರಣೆಯ ನಂತರ ಶನಿವಾರ (ಅ.18) ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ವಿಶೇಷ ನ್ಯಾಯಾಲಯ ಶಿಕ್ಷಕ ದ್ರೋಣರಾಜು ಸುಬ್ರಹ್ಮಣ್ಯೇಶ್ವರ ರಾವ್‌ನ್ನು (60) ಅಪರಾಧಿ ಘೋಷಿಸಿ, 10 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

2017ರ ಡಿಸೆಂಬರ್‌ನಲ್ಲಿ ಈ ಕೃತ್ಯ ನಡೆದಿದೆ. ಸಂತ್ರಸ್ತ ಬಾಲಕಿ ರಾಜೇಂದ್ರ ನಗರ ಮಂಡಲದ ಹೈದರ್ಗುಡ ನಿವಾಸಿಯಾಗಿದ್ದು, 7ನೇ ತರಗತಿಯಲ್ಲಿ ಓದುತ್ತಿದ್ದಳು. ತಾವಿದ್ದ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ ಅಪರಾಧಿ ದ್ರೋಣರಾಜು ಸುಬ್ರಹ್ಮಣ್ಯೇಶ್ವರ ರಾವ್ ಮನೆಗೆ ಟ್ಯೂಷನ್‌ಗೆಂದು ಹೋಗುತ್ತಿದ್ದಳು. ಹೀಗೊಂದು ದಿನ ಸಂತ್ರಸ್ತ ಬಾಲಕಿಯ ಪೋಷಕರು ಚೆನ್ನೈಗೆ ಹೋಗಿದ್ದರು. ತಡರಾತ್ರಿ ಬಾಲಕಿ ತನ್ನ ತಾಯಿಗೆ ಕರೆ ಮಾಡಿ, ಟ್ಯೂಷನ್ ಟೀಚರ್ ಕ್ಲಾಸ್ ಮುಗಿದ ಬಳಿಕ ಎಲ್ಲರನ್ನು ಕಳುಹಿಸಿ, ನನ್ನನ್ನು ಅವರ ರೂಮ್‌ಗೆ ಕರೆದುಕೊಂಡು ಹೋಗಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಳು.

ವಿಷಯ ಗೊತ್ತಗುತ್ತಿದ್ದಂತೆ ಬಾಲಕಿಯ ತಾಯಿ ಊರಿಗೆ ಹಿಂತಿರುಗಿ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಟ್ಯೂಷನ್ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 376(2)(ಎಫ್‌)(ಐ), ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 6, ಸೆಕ್ಷನ್ 5(o) ಮತ್ತು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇನ್ಸ್ಪೆಕ್ಟರ್ ವಿ ಉಮೇಂದರ್ ಮತ್ತು ಸಹಾಯಕ ಪೊಲೀಸ್ ಆಯುಕ್ತ ಕೆ.ಅಶೋಕ್ ಚಕ್ರವರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ, ಬಳಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಬಳಿಕ ತೆಲಂಗಾಣದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಆಂಜನೇಯುಲು ಅವರು ತೀರ್ಪು ಪ್ರಕಟಿಸಿ, ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *