ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಗಳು ಹೆಚ್ಚಾಗುತ್ತಿದೆ. ಆದ್ದರಿಂದ ಇವುಗಳ ಬಳಕೆ ಮಿತಗೊಳಿಸಬೇಕು. ಪ್ರತಿಯೊಬ್ಬರು ಕಣ್ಣಿನ ಆರೋಗ್ಯ ಬಗ್ಗೆ ಕಾಳಜಿ, ಮುಂಜಾಗ್ರತೆ ವಹಿಸಬೇಕು ಎಂದು ನೇತ್ರಾಧಿಕಾರಿ ಡಾ.ದಸ್ತಗಿರ್ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “28ನೇ ವಿಶ್ವ ದೃಷ್ಟಿ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕಾಂಶವುಳ್ಳ ಸಮತೋಲಿತ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆ, ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ಸ್ವಲ್ಪ ವಿಶ್ರಾಂತಿ, ಧೂಮಪಾನ ತ್ಯಜಿಸುವುದು, ಸೂಕ್ತ ಕಣ್ಣಿನ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು, ವಿಟಾಮಿನ್-ಎ ಸೇವನೆ, ಕಣ್ಣಿನ ಸ್ವಚ್ಚತೆ ಕಾಪಾಡುವುದು ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅನೇಕ ಸಲಹೆ-ಸೂಚನೆಗಳ ನೀಡಿದರು.
ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಲು ಹಾಗೂ ಕಣ್ಣು ದಾನದ ಮೂಲಕ ದೃಷ್ಟಿ ವಿಕಲಚೇತನರ ಜೀವನದಲ್ಲಿ ಭರವಸೆ ಮೂಡಿಸುವುದರ ಜೊತೆಗೆ ಕಣ್ಣಿನ ಆರೋಗ್ಯದ ಮಹತ್ವವನ್ನು ಸಾರಲು ಪ್ರತಿವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರವನ್ನು ‘ವಿಶ್ವ ದೃಷ್ಟಿ ದಿನ’ವನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಂಸ್ಥೆಯ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಮತ್ತು ವಿದ್ಯಾರ್ಥಿಗಳು ಇದ್ದರು.