ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಪುರುಷರ ಗುಂಪೊಂದು ರಾವಣನ ಬದಲು ಶ್ರೀರಾಮನ ಪ್ರತಿಕೃತಿ ದಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಾಮನ ಪ್ರತಿಕೃತಿ ದಹಿಸಿದ್ದಷ್ಟೇ ಅಲ್ಲದೆ ರಾವಣನ ಸ್ತುತಿಯನ್ನು ಪಠಿಸಿದ್ದಾರೆ. ‘ಫಿಫ್ತ್ ತಮಿಳು ಸಂಗಮ್’ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಈ ದೃಶ್ಯಗಳು ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸ್ ಕ್ರಮಕ್ಕೆ ಕಾರಣವಾಯಿತು. ವೀಡಿಯೊದಲ್ಲಿ, ಪುರುಷರು ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಾ ರಾವಣನನ್ನು ಸ್ತುತಿಸಿ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು.
ಸೈಬರ್ ಕ್ರೈಂ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 192, 196 (1) (ಎ), 197, 299, 302 ಮತ್ತು 353 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ನಂತರ ಅಧಿಕಾರಿಗಳು ಗುರುವಾರ 36 ವರ್ಷದ ಅಡೈಕಳರಾಜ್ ಅವರನ್ನು ಬಂಧಿಸಿದ್ದಾರೆ ಮತ್ತು ಭಾಗಿಯಾಗಿರುವ ಇತರರಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದೆವೆ ಎಂದರು.
ಅಂತಹ ಪೋಸ್ಟ್ಗಳನ್ನು ರಚಿಸುವುದು ಅಥವಾ ಪ್ರಸಾರ ಮಾಡುವುದರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದಾರೆ, ಇದಕ್ಕೆ ಕಾರಣರೆಂದು ಕಂಡುಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ರಾಮನ ಪ್ರತಿಕೃತಿ ದಹಿಸಿದ ವಿಡಿಯೋ
ಮತ್ತೊಂದು ಘಟನೆ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಗುರುವಾರ ರಾವಣ ದಹನ ಕಾರ್ಯಕ್ರಮದ ವೇಳೆ ಘರ್ಷಣೆ ಸಂಭವಿಸಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಎರಡು ವಿದ್ಯಾರ್ಥಿ ಗುಂಪುಗಳು ಪರಸ್ಪರ ಚಪ್ಪಲಿಗಳನ್ನು ಎಸೆಯಲು ಪ್ರಾರಂಭಿಸಿದವು. ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಎಡಪಂಥೀಯ ವಿದ್ಯಾರ್ಥಿ ಗುಂಪುಗಳು ದಾಳಿ ಮಾಡಿವೆ ಎಂದು ಎಬಿವಿಪಿ ಆರೋಪಿಸಿದೆ.
ಅಲ್ಲಿನ ಮಾಜಿ ಜೆಎನ್ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಫೋಟೊಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಖಾಲಿದ್ ಮತ್ತು ಇಮಾಮ್ ಇಬ್ಬರು ಪ್ರಸ್ತುತ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ದೆಹಲಿ ಗಲಭೆ ಪಿತೂರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ರಾವಣ ದಹನ ಕಾರ್ಯಕ್ರಮದ ಮೂಲಕ ಎಬಿವಿಪಿ ರಾಜಕೀಯ ಪ್ರಚಾರಕ್ಕಾಗಿ ಧರ್ಮವನ್ನು ಬಳಸುತ್ತಿದೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿದವು. ಆದಾಗ್ಯೂ ಈ ವಿಷಯದ ಬಗ್ಗೆ ಜೆಎನ್ಯು ಆಡಳಿತದಿಂದ ಯಾವುದೆ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.