ಬೆಂಗಳೂರು/ನವದೆಹಲಿ: ಸೂರ್ಯ, ಭೂಮಿ ಮತ್ತು ಚಂದ್ರರು ಒಂದೆ ಸಾಲಿನಲ್ಲಿ ನಿಂತಾಗ ಚಂದ್ರನ ಮೇಲೆ ಭೂಮಿಯ ಬೆಳಕು ಬೀಳುವುದೆ ಚಂದ್ರಗ್ರಹಣ. ಇಂದು (ರವಿವಾರ) ಸಂಭವಿಸಿದ ಅಪರೂಪದ ರಕ್ತಚಂದ್ರ ಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿದೆ. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ದೇಶದ ಜನ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗದ ಜನ ಕಣ್ತುಂಬಿಕೊಂಡು ಖುಷಿಪಟ್ಟರು.
ಎಲ್ಲೆಲ್ಲಿ ರಕ್ತಚಂದ್ರನ ದರ್ಶನ ?
ನೆರೆಯ ಕೇರಳದ ತಿರುನಂತಪುರದಲ್ಲಿ ಭಾಗಶಃ ಹಂತದಿಂದ ಪೂರ್ಣ ಗ್ರಹಣ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಾನೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲೂ ಚಂದ್ರ ಕೆಂಪು ವರ್ಣಕ್ಕೆ ತಿರುಗುತ್ತಿದ್ದಾನೆ. ಕಾಶ್ಮೀರದ ಶ್ರೀನಗರದಲ್ಲಿ ಪೂರ್ಣ ಚಂದ್ರನ ದರ್ಶನವಾಗಿದ್ದು, ಗ್ರಹಣ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಇನ್ನೂ ರಾಷ್ಟ್ರ ರಾಜಧಾನಿಯಲ್ಲಿ ಕೆಂಪುಚಂದ್ರನ ದರ್ಶನವಾಗುತ್ತಿದೆ.
ಭಾರತದಿಂದಾಚೆಗೆ ನೋಡುವುದಾದರೆ ಯುಎಇನಲ್ಲಿ ದಶಕಗಳ ಬಳಿಕ ಅತಿ ಉದ್ದದ ಚಂದ್ರಗ್ರಹಣ ದರ್ಶನವಾಗಿದೆ. ಬುರ್ಜ್ ಖಲಿಫಾದ ಹಿಂದೆಯೂ ಚಂದ್ರಗ್ರಹಣ ಕಾಣಿಸಿಕೊಂಡಿದೆ. ಜೊತೆಗೆ ನಮೀಬಿಯಾ, ಇಸ್ರೇಲ್ನಲ್ಲೂ ರಕ್ತಚಂದ್ರನ ದರ್ಶನವಾಗಿದೆ.