ಶ್ವಾನಕ್ಕೆ ಮಾಡಿಸಿದ ಆಧಾರ್ ಕಾರ್ಡ್ ಹಿಂದಿದೆ ಮನಕಲುಕುವ ಕತೆ: ತಪ್ಪಿತಸ್ಥರ ವಿರುದ್ಧ ತನಿಖೆಗೆ ಆದೇಶಿಸಿದ ಡಿಸಿ

ರಾಷ್ಟೀಯ

ಭೋಪಾಲ್: ನಾಯಿಗೆ ಆಧಾರ್‌ಕಾರ್ಡ್‌ ಮಾಡಿಸಿದ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಇದರ ಸತ್ಯಾಸತ್ಯತೆ ಹುಡುಕಲು ಹೊರಟ ಅಂಗ್ಲ ಮಾಧ್ಯಮವೊಂದು ಇದರ ಹಿಂದಿನ ರಿಯಲ್ ಕತೆ ಏನು ಎಂಬುದನ್ನು ಬಹಿರಂಗಪಡಿಸಿದೆ.

ಕೆಲ ದಿನಗಳ ಹಿಂದೆ ಶ್ವಾನಕ್ಕೆ ಆಧಾರ್‌ ಕಾರ್ಡ್ ಮಾಡಿಸಲಾಗಿದೆ ಎಂಬ ವಿಚಾರದ ಜೊತೆ ನಾಯಿಯ ಫೋಟೋ ಇರುವ ಆಧಾರ್‌ಕಾರ್ಡ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಈ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಈ ಆಧಾರ್‌ ಕಾರ್ಡ್‌ನಲ್ಲಿರುವ ವಿಳಾಸ ಯಾರದ್ದು ಇದರ ಅಸಲಿಯತ್ತು ಏನು ಎಂಬಾ ವಿಚಾರ ಈಗ ಬಹಿರಂಗವಾಗಿದೆ.

ಈ ಶ್ವಾನದ ಆಧಾರ್‌ ಕಾರ್ಡ್‌ ಹಿಂದಿನ ಅಸಲಿಯತ್ತೆನು ?
ಕೆಲವು ತಿಂಗಳ ಹಿಂದೆ ಬಿಹಾರದ ಪಾಟ್ನಾದಲ್ಲಿ ನಾಯಿಯ ಚಿತ್ರ ಬಳಸಿಕೊಂಡು ಡಾಗ್ ಬಾಬು ಎಂಬ ಹೆಸರಿನಲ್ಲಿ ಸರ್ಕಾರದ ಸಾರ್ವಜನಿಕ ಸೇವೆಗಳ ಹಕ್ಕಿನ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲಾಗಿರುವ ಬಗ್ಗೆ ವರದಿಯಾಗಿತ್ತು. ಟಾಮಿ ಜೈಸ್ವಾಲ್ ಹೆಸರಿನಲ್ಲಿ ಶ್ವಾನಕ್ಕೆ ಆಧಾರ್‌ ಕಾರ್ಡ್ ಮಾಡಲಾಗಿತ್ತು. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿತ್ತು.

ಶ್ವಾನದ ಹೆಸರಿನ ಈ ಆಧಾರ್‌ ಕಾರ್ಡ್‌ ಸಂಪೂರ್ಣವಾಗಿ ಆಧಾರ್‌ ಕಾರ್ಡ್‌ ಲಕ್ಷಣ ಹೊಂದಿದೆ. ಅದರಲ್ಲಿ ನಾಯಿಯ ಹೆಸರನ್ನು ಟಾಮಿ ಜೈಸ್ವಾಲ್ ಎಂದು ಬರೆಯಲಾಗಿದ್ದು, ಇಂಡಿ ತಳಿಯ ಶ್ವಾನದ ಫೋಟೋ ಆಧಾರ್‌ ಕಾರ್ಡ್‌ ಮೇಲಿದೆ. ಹಾಗೆ ಅದರಲ್ಲಿರುವ ವಿಳಾಸ ಗ್ವಾಲಿಯರ್‌ ಜಿಲ್ಲೆಯ ಸಿಮಿರಿಯಾ ತಾಲ್ ಪ್ರದೇಶದ ದಬ್ರಾ ನಗರಪಾಲಿಕೆಗೆ ಸೇರುತ್ತದೆ. ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಯಂತೆ ಈ ಶ್ವಾನದ ಮಾಲೀಕತ್ವ ಕೈಲಾಸ್ ಜೈಸ್ವಾಲ್ ಎಂಬುವವರ ಹೆಸರಿನಲ್ಲಿದೆ. ಹಾಗಾದರೆ ಯಾರಾದರೂ ನಿಜವಾಗಿಯೂ ನಾಯಿಗಾಗಿ ಆಧಾರ್‌ ಕಾರ್ಡ್ ಮಾಡಿದ್ದಾರಾ ? ಖಂಡಿತ ಇಲ್ಲ, ಹಾಗಿದ್ದರೆ ಅದರ ಮೇಲಿದ್ದ ಆಧಾರ್‌ ಸಂಖ್ಯೆ ಯಾವುದು ? ಈ ವಿಚಾರ ಹುಡುಕುತ್ತಾ ಹೊರಟ ಅಂಗ್ಲ ಮಾಧ್ಯಮವೊಂದಕ್ಕೆ ಅಲ್ಲಿ ಶಾಕಿಂಗ್ ವಿಚಾರ ಬೆಳಕಿಗೆ ಬಂದಿತ್ತು.

ಆಧಾರ್‌ ಕಾರ್ಡ್‌ನಲ್ಲಿದ್ದ ನಂಬರ್ ಯಾರದ್ದು ?
ಆಧಾರ್‌ ಕಾರ್ಡ್‌ಗಾಗಿ ಶ್ವಾನ ಟಾಮಿಯ ಐಡಿ ರಚಿಸಲು ಯಾವುದೆ ವ್ಯಕ್ತಿಯ ಆಧಾರ್ ಕಾರ್ಡ್ ಬಳಸಿರಲಿಲ್ಲ, ಆದರೆ ವಿಳಾಸವನ್ನು ಬಳಸಲಾಗಿತ್ತು. ಈ ಬಗ್ಗೆ ಆಧಾರ್‌ ವೆಬ್‌ಸೈಟ್‌ನಲ್ಲಿ ಈ ಐಡಿಯಲ್ಲಿದ್ದ UID number, 070001051580 ಹಾಕಿ ಹುಡುಕಾಟ ನಡೆಸಿದಾಗ ದಯವಿಟ್ಟು ಸರಿಯಾದ ಆಧಾರ್ ನಂಬರ್‌ ಬಳಸುವಂತೆ ಮೆಸೇಜ್ ಬಂದಿದೆ. ಇದರಿಂದ ಈ ನಂಬರ್ ನಿಜವಾದ ಆಧಾರ್ ಕಾರ್ಡ್ ಅಲ್ಲ ಫೇಕ್ ಎಂಬುದು ತಿಳಿದು ಬಂದಿತು. ಹೀಗಾಗಿ ಆ ಮಾಧ್ಯಮದ ವರದಿಗಾರರು ದಬ್ರಾ ಗ್ರಾಮದ ಜನರನ್ನು ಮಾತನಾಡಿಸಿದಾಗ ಒಂದು ಫೋನ್ ನಂಬರ್‌ ಹಿಂದೆ ಮುಂದೆ ಸೊನ್ನೆಯನ್ನು ಸೇರಿಸಿ ಈ ನಕಲಿ ಆಧಾರ್‌ ಕಾರ್ಡ್‌ ನಿರ್ಮಿಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತು. ಹೀಗಾಗಿ ಟ್ರೂ ಕಾಲರ್ ನೀಡಿದ ಮಾಹಿತಿ ಆಧಾರಿಸಿ ಈ ಸಂಖ್ಯೆಗೆ ಕರೆ ಮಾಡಿದಾಗ ಈ ನಂಬರ್ ಮಧ್ಯಪ್ರದೇಶದ ಪವನ್ ಜೈಸ್ವಾಲ್ ಎಂಬುವವರಿಗೆ ಸೇರಿದೆ ಎಂಬ ಮಾಹಿತಿ ಸಿಕ್ಕಿದೆ.

ಮಹಿಳೆಯೊಬ್ಬರ ಮೃತಪಟ್ಟ ಮಗನ ವಿಳಾಸ ಬಳಸಿ ನಕಲಿ ಆಧಾರ್‌ ಕಾರ್ಡ್ ಮಾಡಿದ್ದ ಕಿಡಿಗೇಡಿಗಳು
ಈ ನಂಬರ್‌ಗೆ ವರದಿಗಾರರು ಕರೆ ಮಾಡಿದಾಗ ಮಮತಾ ಜೈಸ್ವಾಲ್ ಎಂಬ ಮಹಿಳೆ ಕರೆ ಸ್ವೀಕರಿಸಿದ್ದಾರೆ. ಅವರು ಹೇಳಿದ ಕತೆ ಕೇಳಿ ಗಾಬರಿಯಾಗುವ ಸ್ಥಿತಿ ಕರೆ ಮಾಡಿದವರದ್ದಾಗಿತ್ತು. ಈ ದೂರವಾಣಿ ಸಂಖ್ಯೆ ಮಮತಾ ಜೈಸ್ವಾಲ್‌ ಅವರ, ಐದು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಹಠಾತ್ ಮೃತಪಟ್ಟ ಏಕೈಕ ಪುತ್ರ ಪವನ್ ಜೈಸ್ವಾಲ್ ಅವರದ್ದಾಗಿತ್ತು. ಮೃತರಾಗುವುದಕ್ಕೂ ಮೊದಲು ಪವನ್ ಲಿಕ್ಕರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆ ತಮ್ಮ ಪತಿಯ ಹೆಸರು ಕೈಲಾಸ್ ಜೈಸ್ವಾಲ್ ಆಗಿದ್ದು, ಅವರು ಸಣ್ಣದೊಂದು ದಿನಸಿ ಅಂಗಡಿ ನಡೆಸುತ್ತಿದ್ದಾರೆ ಎಂದು ಮಮತಾ ಜೈಸ್ವಾಲ್ ಹೇಳಿಕೊಂಡಿದ್ದಾರೆ. ಈ ಕಾರ್ಡ್‌ನಲ್ಲಿ ಬಳಸಲಾಗಿರುವ ವಿಳಾಸ ನಮ್ಮದಾಗಿದ್ದು, ಆ ಫೋಟೋದಲ್ಲಿರುವ ಶ್ವಾನದ ಫೋಟೋ ಕೂಡ ನಮ್ಮದೆ, 12 ವರ್ಷ ನಮ್ಮ ಜೊತೆ ಇದ್ದ ಈ ಶ್ವಾನ ವರ್ಷದ ಹಿಂದೆ ಅಗಲಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ವಿಚಾರದ ಬಗ್ಗೆ ನಾವು ಪೊಲೀಸರಿಗೆ ದೂರು ನೀಡುತ್ತೆವೆ ಇದರಿಂದ ನಮಗೆ ತುಂಬಾ ತೊಂದರೆ ಆಗಿದೆ. ನಾವು ನಮ್ಮದೆ ಆಧಾರ್‌ ಕಾರ್ಡ್ ಮಾಡಿಸಿಕೊಳ್ಳುವಷ್ಟು ಸುಶಿಕ್ಷಿತರಲ್ಲ, ಹೀಗಿರುವಾಗ ಶ್ವಾನದ ಆಧಾರ್‌ ಕಾರ್ಡ್ ಮಾಡಿಸಲು ಹೇಗೆ ಸಾಧ್ಯ ? ನಾವು ಆಧಾರ್‌ ಕಾರ್ಡ್ ಎಡಿಟ್ ಮಾಡಿ ಶ್ವಾನದ ಆಧಾರ್‌ ಕಾರ್ಡ್ ಮಾಡಿಸಲು ಹೇಗೆ ಸಾಧ್ಯ ? ಎಂದು ಅವರು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಮಾತನಾಡಿ, ಇದೊಂದು ನಕಲಿ ಆಧಾರ್‌ ಕಾರ್ಡ್, ಇದನ್ನು ಮಾಡಿಸಿದವರು ಯಾರು ? ಯಾವ ಕಾರಣಕ್ಕೆ ಸೃಷ್ಟಿಸಿದರು ? ಯಾಕೆ ವೈರಲ್ ಮಾಡಿದರು ಇದರ ಹಿಂದಿನ ಉದ್ದೇಶ ಏನು ? ಎಂಬುದನ್ನು ತಿಳಿಯುವುದಕ್ಕೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ‌.

Leave a Reply

Your email address will not be published. Required fields are marked *