ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೆನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉಚಿತ ಆಸ್ಪತ್ರೆ ತಲೆ ಎತ್ತುತ್ತಿದೆ. ಮೊದಲ ಬಾರಿಗೆ ಜಗತ್ತಿನ ಎಲ್ಲಾ ಭಾಗದ ಎಲ್ಲಾ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್ ಕಟ್ಟಡ ತಲೆ ಎತ್ತುತ್ತಿದೆ.
ಸುಮಾರು 6,50,000 ಚದರಡಿ ವಿಸ್ತೀರ್ಣದಲ್ಲಿ ತಲೆ ಎತ್ತುತ್ತಿರುವ ಈ ಭವ್ಯ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ.
ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜಾಗಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 2023ರಲ್ಲಿ ಉದ್ಘಾಟನೆಗೊಂಡಿದ್ದು ಇದೊಂದು ಪ್ರಮುಖ ಮೈಲುಗಲ್ಲು. ಈ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದರ ಬೋಧನಾ ಆಸ್ಪತ್ರೆಯು ಇದೆ ವರ್ಷದ ನವೆಂಬರ್ನಲ್ಲಿ 600 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಘಟಕವಾಗಿ ವಿಸ್ತರಣೆಯಾಗುತ್ತಿದೆ. ಇದು ವಿಶ್ವದ ಅತಿ ದೊಡ್ಡ ಸಂಪೂರ್ಣ ಉಚಿತ ಆಸ್ಪತ್ರೆಯಾಗಲಿದೆ.
ಆಸ್ಪತ್ರೆಯಲ್ಲಿ ಏನೆನು ಇರಲಿದೆ ?
ಸುಮಾರು 5 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ಆಸ್ಪತ್ರೆ ನೆಲಮಹಡಿ, ತಳಮಹಡಿ ಹಾಗೂ 5 ಮಹಡಿಗಳು ಒಳಗೊಂಡಿದೆ. 600 ಹಾಸಿಗೆ ಸಾಮರ್ಥ್ಯದಲ್ಲಿ 100 ಐಸಿಯು ಬೆಡ್ಗಳು ಇರಲಿವೆ. 11 ಆಪರೇಷನ್ ಥಿಯೇಟರ್ಗಳನ್ನು ಈ ಆಸ್ಪತ್ರೆ ಸಮುಚ್ಚಯ ಒಳಗೊಂಡಿದೆ. ವಿಶೇಷ ಎಂದರೆ ಇಲ್ಲಿ ಯಾವುದೆ ಶುಲ್ಕ ಇರುವುದಿಲ್ಲ. ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಇರಲ್ಲ.
ಗೋಪುರದ ಮೇಲೆ ಧನ್ವಂತರಿ ಪ್ರತಿಮೆ
ಈ ಆಸ್ಪತ್ರೆಯ ವಿಶೇಷ ಎಂದರೆ ದೊಡ್ಡ ಗೋಪುರದ ಮೇಲೆ ಆರೋಗ್ಯ ದೇವತೆ ಎಂದೆ ಹೆಸರಾಗಿರುವ ಶ್ರೀ ಧನ್ವಂತರಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಸುಮಾರು 20 ಎತ್ತರದ ಧನ್ವಂತರಿ ಮೂರ್ತಿಯನ್ನು ಗೋಪುರದ ಮೇಲೆ ಪ್ರತಿಷ್ಠಾಪಿಸಲಾಗುತ್ತಿದೆ. ಆರೋಗ್ಯ ದೇವತೆಯ ರಕ್ಷೆಯ ಪರಿಕಲ್ಪನೆಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿರುವದು ಕುತೂಹಲ ಕೆರಳಿಸಿದೆ.
ಬಿಲ್ಲಿಂಗ್ ಕೌಂಟರ್ ಇಲ್ಲದ, ಆರೈಕೆ, ಕರುಣೆ ಮತ್ತು ಬದ್ಧತೆಯಿಂದ ರೋಗಿಗಳ ಆರೈಕೆ ಮಾಡಿ ಗುಣಪಡಿಸುವ ದೇವಾಲಯ ಇದು. ಇದು ಕೇವಲ ಆಸ್ಪತ್ರೆಯಲ್ಲ, ಮಾನವೀಯತೆಗೆ ನೀಡಿದ ಭರವಸೆ. ಇಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸಿಗಲಿದೆ. ಆರೋಗ್ಯ ರಕ್ಷಣೆ ಒಂದು ಸವಲತ್ತು ಅಲ್ಲ, ಅದು ಒಂದು ಹಕ್ಕು ಎಂದಿದ್ದಾರೆ.