ಕಲಬುರಗಿ: ದೇಶದ ಪ್ರತಿಯೊಬ್ಬರಲ್ಲಿ ಯುವಕರು ಸೈನಿಕರಂತೆ ದೇಶದ ರಕ್ಷಣೆ, ಒಳಿತಿಗಾಗಿ ಸೇವೆ ಸಲ್ಲಿಸುವುದು ಅಗತ್ಯವಾಗಿದೆ ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕ ಶಿವಶರಣಪ್ಪ ಎಸ್ ತಾವರಖೇಡ್ ಯುವಕರಿಗೆ ಸಲಹೆ ನೀಡಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ‘26ನೇ ಕಾರ್ಗಿಲ್ ವಿಜಯ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯೋತ್ಸವದ ಯಶೋಗಾಥೆ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೆ ಕೋರ್ಸ ಅಧ್ಯಯನ ಮಾಡಿಕೊಂಡು, ಕ್ಷೇತ್ರದಲ್ಲಿ ಕೆಲಸ ಮಾಡಿ. ಆದರೆ ದೇಶ ಸೇವೆ, ಭಕ್ತಿ, ರಕ್ಷಣೆ ಎಂಬುದು ಕೇವಲ ಸೈನಿಕರಿಗೆ ಮಾತ್ರ ಸೀಮಿತವಲ್ಲ. ಸರ್ವರು ದೇಶದ ರಕ್ಷಣೆ, ಒಳಿತಿಗಾಗಿ ಸೇವೆ ಸಲ್ಲಿಸುವುದು ಅಗತ್ಯ ಎಂದರು.
ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಕಾರ್ಗಿಲ ಪ್ರದೇಶದೊಳಗೆ ನುಸಳಿರುವ ವಿಷಯ ತಿಳಿದ ನಮ್ಮ ಸೈನಿಕರು ಅಲ್ಲಿಗೆ ತೆರಳಿದಾಗ ಅವರು ನಮ್ಮ ಮೇಲೆ ದಾಳಿ ಮಾಡಿ ಹತ್ಯೆಗೊಳಿಸಿದರು. ಇದರಿಂದ ನಮ್ಮ ಎಲ್ಲಾ ಸೈನಿಕರು ಪಾಕಿಸ್ತಾನದ ಸೈನಿಕರೊಂದಿಗೆ ಮೇ-5,1999 ರಿಂದ ಜು.26,1999ರ ವರಗೆ ನಿರಂತರವಾಗಿ ಯುದ್ಧ ಮಾಡಿ, ಕೊನೆಗೆ ವಿಜಯದ ಪತಾಕೆ ಹಾರಿಸಿದರು. ಈ ಯುದ್ಧದಲ್ಲಿ ಭಾಗವಹಿಸಿದ್ದಾಗ ನನ್ನ ಕಣ್ಣಿನ ಬಳಿ ಗುಂಡು ತಗಲಿದರು ಕೂಡಾ ನನಗೆ ನನ್ನ ದೇಹಕ್ಕಿಂತ ದೇಶ ಮುಖ್ಯ ಎಂದು ಸೇವೆ ಸಲ್ಲಿಸಿದ್ದೆನೆ ಎಂದಾಗ ಎಲ್ಲರ ಕಣ್ಣಲೆಗಳು ತೇವವಾದವು. ನಮ್ಮಲ್ಲಿ ದೇಶದ ಕಿಚ್ಚು ಹಚ್ಚುವ ಕೆಲಸ ಇದಾಗಿದೆ ಎಂದು ವಿದ್ಯಾರ್ಥಿಗಳು, ಸೈನಿಕರಿಗೆ ಸೆಲ್ಯೂಟ್ ಸಲ್ಲಿಸಿದ ಘಟನೆ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎಚ್.ಬಿ ಪಾಟೀಲ್, ಹಿಮಾವೃತ ಪ್ರದೇಶ, ವಿಪರಿತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು-ರಾತ್ರಿಯೆನ್ನದೆ ದೇಶದ ರಕ್ಷಣೆಗೆ ಸದಾ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಸೈನಿಕರಿಗೆ ದೇಶವೆ ತಮ್ಮ ಪರಿವಾರವೆಂಬ ಭಾವನೆಯಿರುತ್ತದೆ. ಸೈನಿಕರ ಬಗ್ಗೆ ಗೌರವವಿರಲಿ. ಭಾರತೀಯ ಸೈನಿಕರು ವಿಶ್ವದಲ್ಲಿಯೇ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಅವರ ಸೇವೆ ಅನನ್ಯ. ಸೈನಿಕ ವೃತ್ತಿಯ ಬಗ್ಗೆ ನಿರ್ಲಕ್ಷ ವಹಿಸದೆ, ಯುವಕರು ದೇಶ ಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಕುಮಾರ ಮುತ್ತಾ, ಶಿವಯೋಗೆಪ್ಪಾ ಎಸ್.ಬಿರಾದಾರ, ಗೌರಿ ಹಿರೇಮಠ, ವಿಶ್ವನಾಥ ನಂದರ್ಗಿ, ಆರ್ದಶ್, ರಕ್ಷಿತಾ, ಭೀಮಾಶಂಕರ, ಗುರುರಾಜ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.