ಅಮೆರಿಕದ ಸ್ಟಾರ್ಟ್ಅಪ್ ಜಗತ್ತಿನಲ್ಲಿ ಒಬ್ಬ ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಬಿರುಗಾಳಿ ಎಬ್ಬಿಸಿದ್ದಾನೆ. ಆತನ ಹೆಸರು ಸೋಹಮ್ ಪರೇಖ್, ಈತ ಕೆಲಸ ಮಾಡುತ್ತಿರುವ ಕಂಪನಿಗೆ ತಿಳಿಸದೆ ಇನ್ನೂ 3- 4 ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪ ಈಗ ಡಿಜಿಟಲ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಪ್ಲೇಗ್ರೌಂಡ್ ಎಐ ಸಂಸ್ಥಾಪಕ ಸುಹೇಲ್ ದೋಷಿ ಈ ಬಾಂಬ್ ಸಿಡಿಸುತ್ತಿದ್ದಂತೆ, ಟೆಕ್ ಲೋಕದ ಹಲವು ಜನರು ತಮಗೂ ಇದೆ ರೀತಿಯ ಅನುಭವ ಆಗಿರುವುದನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಇದು ನೇಮಕಾತಿ ವಂಚನೆಯ ಬಗ್ಗೆ ಗಂಭೀರ ಚರ್ಚೆಯಾಗಿ ಮಾರ್ಪಟ್ಟಿದೆ. ಜೊತೆಗೆ ಆನ್ಲೈನ್ ತುಂಬಾ ಮೀಮ್ಗಳ ಸುರಿಮಳೆ, ಎಚ್ಚರಿಕೆ ಸಂದೇಶಗಳ ಮೂಲಕ ಇದು ‘ಸೋಹಮ್-ಗೇಟ್’ ಎಂಬ ವೈರಲ್ ವಿದ್ಯಮಾನವಾಗಿ ಬದಲಾಗಿದೆ.
ಒಂದು ರೆಸ್ಯೂಮ್, ಹಲವು ಉದ್ಯೋಗಗಳು
ದೋಷಿ ಮತ್ತು ಇತರ ಸಂಸ್ಥಾಪಕರ ಪ್ರಕಾರ ಸೋಹಮ್ ಪರೇಖ್ ಕೇವಲ ಒಬ್ಬ ಸಾಮಾನ್ಯ ಉದ್ಯೋಗಿಯಾಗಿರಲಿಲ್ಲ. ಅಲನ್ ಎಐ, ಸಿಂಥೇಷಿಯಾ, ಡೈನಮೋಎಐ, ಯೂನಿಯನ್’ಐ ನಂತಹ ಪ್ರತಿಷ್ಠಿತ ಸ್ಟಾರ್ಟ್ಅಪ್ಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಈತ ತನ್ನ ಸ್ಥಳ ಅನುಭವ ಮತ್ತು ಲಭ್ಯತೆಯ ಬಗ್ಗೆ ಸುಳ್ಳಿನ ಸರಮಾಲೆಯನ್ನೆ ಹೆಣೆದಿದ್ದ. ತನ್ನ ರೆಸ್ಯೂಮ್ ತಿರುಚಿ, ಒಂದಕ್ಕಿಂತ ಹೆಚ್ಚು ಗುರುತುಗಳನ್ನು ಬಳಸಿ, ಕಂಪನಿಗಳನ್ನು ನಂಬಿಸಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದ.
ಒಂದು ಕಂಪನಿ ಅಮೆರಿಕದ ವಿಳಾಸಕ್ಕೆ ಲ್ಯಾಪ್ಟಾಪ್ ಕಳುಹಿಸಿದರೆ, ಅಲ್ಲಿ ಅದನ್ನು ‘ನಾನು ಅವನ ಸಹೋದರಿ’ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಇದನ್ನು ಸ್ವೀಕರಿಸಿದ್ದರು. ಈ ಘಟನೆಯು ರಿಮೋಟ್ ನೇಮಕಾತಿಯಲ್ಲಿರುವ ದೊಡ್ಡ ಲೋಪದೋಷಗಳು ಜಗಜ್ಜಾಹೀರಾಗಿವೆ.
ಆರೋಪಗಳು ಬಯಲಾಗುತ್ತಿದ್ದಂತೆ ಟ್ವಿಟರ್, ಲಿಂಕ್ಡ್ಇನ್ ಮತ್ತು ಸ್ಟಾರ್ಟ್ಅಪ್ ಫೋರಮ್ಗಳಲ್ಲಿ ಸೋಹಮ್ ಪರೇಖ್ ಹೆಸರು ದೊಡ್ಡ ಚರ್ಚೆಯ ವಿಷಯವಾಗಿದೆ. ಸಂಸ್ಥಾಪಕರು ಪರೇಖ್ ಜೊತೆಗಿನ ವರ್ಚುವಲ್ ಮೀಟಿಂಗ್ಗಳು ಮತ್ತು ಸಂಭಾಷಣೆಯ ಸ್ಕ್ರೀನ್ಶಾಟ್ ಹಂಚಿಕೊಳ್ಳುತ್ತಿದ್ದಾರೆ.
ಸೋಹಮ್-ಗೇಟ್ ಹೆಸರಲ್ಲಿ ವೈರಲ್
ಕೆಲವರು ಈತನ ಚಾಕಚಕ್ಯತೆಗೆ ಬೆರಗಾದರೆ, ಇತರರು ಹಾಸ್ಯದ ಮೂಲಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಮುಂದುವರಿದು ಇದು ‘ಸೋಹಮ್-ಗೇಟ್’ ಹೆಸರಿನಲ್ಲಿ ವೈರಲ್ ಆಗಿದ್ದು, ಮೀಮ್ಗಳು ತುಂಬಿ ತುಳುಕುತ್ತಿವೆ.
ಈ ಪ್ರಕರಣ ಕೇವಲ ಪರೇಖ್ನ ವಂಚನೆಯ ಬಗ್ಗೆ ಮಾತ್ರವಲ್ಲದೆ, ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಟ್ಟ ‘ರಿಮೋಟ್ ವರ್ಕ್’ ಸಂಸ್ಕೃತಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತ್ತೆ ಮುನ್ನೆಲೆಗೆ ಬಂದ ಮೂನ್ಲೈಟಿಂಗ್ ಚರ್ಚೆ
ಈ ಹಗರಣದ ಬಗ್ಗೆ ಇಂಟರ್ನೆಟ್ನಲ್ಲಿ ಎರಡು ಭಿನ್ನ ರೀತಿಯ ಚರ್ಚೆಗಳು ನಡೆಯುತ್ತಿವೆ. ಅನೇಕರು ಸೋಹಮ್ ಪರೇಖ್ನ ಅನೈತಿಕ ನಡವಳಿಕೆ ಮತ್ತು ವಂಚನೆ ತೀವ್ರವಾಗಿ ಖಂಡಿಸಿದರೆ, ಇನ್ನು ಕೆಲವರು ಆತ ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಸ್ಟಾರ್ಟ್ಅಪ್ ಜಗತ್ತಿನಲ್ಲಿರುವ ಕಡಿಮೆ ಸಂಬಳ, ಅತಿಯಾದ ಕೆಲಸದ ಒತ್ತಡ ಮತ್ತು ಅವಾಸ್ತವಿಕ ನಿರೀಕ್ಷೆಗಳಿಗೆ ಇನ್ನೆನು ಮಾಡಬೇಕು ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಒಬ್ಬ ವ್ಯಕ್ತಿ ಹಲವು ಕಡೆ ಕೆಲಸ ಮಾಡಿದರೆ ತಪ್ಪೆನು ? ಎಂದು ಕೇಳಿದ್ದಾರೆ. ಮತ್ತೆ ಕೆಲವರು ಇದೆ ವಿಚಾರ ಇಟ್ಟುಕೊಂಡು ಟೆಕ್ ವಲಯದಲ್ಲಿನ ‘ಮೂನ್ಲೈಟಿಂಗ್’ (ಒಂದೆ ಸಮಯದಲ್ಲಿ ಹಲವು ಉದ್ಯೋಗ) ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ತಂದಿದ್ದಾರೆ.