ಬೆಂಗಳೂರು (ಪ್ಯಾರಿಸ್): ಜಾಗತಿಕ ಅಂತರಿಕ್ಷಯಾನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ಬೆಳೆದಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಮುನ್ನಡೆ ಸಾಧಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ಯಾರಿಸ್ ಏರ್ ಫೋರಂ ಚರ್ಚಾಕೂಟದಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳ ನಡುವೆ ಮಾತ್ರವಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಗಳಲ್ಲಿಯೂ ಸಹ ಸಹಯೋಗದ ಮಹತ್ವವನ್ನು ಎತ್ತಿ ತೋರಿಸಿದರು. ಪ್ರತಿಯೊಬ್ಬ ಪಾಲುದಾರರಿಂದ ಪಡೆಯಬೇಕಾದ ಮೌಲ್ಯ ಮತ್ತು ಕಲಿಕೆ ಅಪಾರವಾಗಿದೆ ಎಂದರು.
ಭಾರತೀಯ ವಾಯುಯಾನ ವಲಯವು 2025ರಲ್ಲಿ $14.8 ಬಿಲಿಯನ್ ಮೌಲ್ಯದ್ದಾಗಿದ್ದು, 2030ರ ವೇಳೆಗೆ $26.1 ಬಿಲಿಯನ್ ಬೆಳವಣಿಗೆಯನ್ನು ಸೂಚಿಸುವ ಮುನ್ಸೂಚನೆಗಳೊಂದಿಗೆ, ಇದು ಸರಿಸುಮಾರು 12% CAGR ಪ್ರತಿಬಿಂಬಿಸುತ್ತದೆ ಎಂಬ ಮಾಹಿತಿ ನಿಡಿದ ಸಚಿವರು ಈ ಉದ್ಯಮವು ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ, ನೇರ GDP ಪರಿಣಾಮ $6 ಬಿಲಿಯನ್ ಮತ್ತು ಪರೋಕ್ಷ ಕೊಡುಗೆ $54 ಬಿಲಿಯನ್ ಕೊಡುಗೆ ನೀಡಿದೆ ಎಂದು ಹೇಳಿದರು.
ಇದು 3,70,000 ನೇರ ಉದ್ಯೋಗಗಳು ಮತ್ತು 7.7 ಮಿಲಿಯನ್ ಪರೋಕ್ಷ ಉದ್ಯೋಗಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ಯಾರೀಸ್ ಏರ್ ಫೋರಂನಲ್ಲಿ ತಿಳಿಸಿದರು.
ವಾಯುಯಾನ, ಅಂತರಿಕ್ಷಯಾನ ಮತ್ತು ಬಾಹ್ಯಾಕಾಶದಲ್ಲಿ ಅವಕಾಶದ ಸಂಪೂರ್ಣ ಲಾಭ ಪಡೆಯಲು ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ ಎಂದು ಸಚಿವರು ಚರ್ಚೆಯ ಸಂದರ್ಭದಲ್ಲಿ ಹೇಳಿದರು.