ಕಲಬುರಗಿ: ದೇವರ ದಾಸಿಮಯ್ಯ ಅವರು ನೇಯ್ಗೆ ಕಾಯಕ ಮಾಡುವದರ ಜೊತೆಗೆ ಮೌಢ್ಯತೆ, ಕಂದಾಚಾರ, ಅಂದಶೃದ್ಧೆ, ಜಾತಿಯತೆ, ಶೋಷಣೆ, ಅನ್ಯಾಯದಂತಹ ಪಿಡುಗುಗಳಿಂದ ತೂತು ಬಿದ್ದ ಸಮಾಜವನ್ನು ತಮ್ಮ ವಚನಗಳ ಮೂಲಕ ನೇಯುವ ಕಾರ್ಯ ಮಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಟ ಶರಣರಾಗಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ‘ಶರಣ ದೇವರ ದಾಸಿಮಯ್ಯನವರ 1046ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ಉಪನ್ಯಾಸಕ ಸಿದ್ದಾರೂಢ ಬಿರಾದಾರ ಮಾತನಾಡಿ, ನೆಮ್ಮದಿ, ಸಮೃದ್ಧಯುತ ಜೀವನ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾದ ಸಮಾಜದಲ್ಲಿ ಒಂದು ಅಮೂಲಾಗ್ರಹವಾದ ಬದಲಾವಣೆಗೆ ಕಾರಣವಾದ ‘ವಚನ ಚಳುವಳಿ’ಗೆ ಪ್ರಮುಖ ಕೊಡುಗೆ ನೀಡಿದ್ದಾರೆ.
‘ರಾಮನಾಥ’ ಎಂಬ ಅಂಕಿತ ನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ ಕಂಟೆಗೋಳ, ಲೇಖಕ ಶಿವಯೋಗೆಪ್ಪಾ ಎ ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ಶಿವಲಿಂಗಪ್ಪ ತಳವಾರ, ಸುಹಾನಿ ಮಾಲಿಪಾಟೀಲ, ಪ್ರಮುಖರಾದ ಭರತ, ದೀಪಿಕಾ, ಐಶ್ವರ್ಯ, ಅಚಿಜಲಿ, ಪ್ರಿಯಾಂಕಾ ಜಿ.ಬಿ, ಪ್ರಿಯಾಂಕಾ ಬಿ.ಟಿ ಸೇರಿದಂತೆ ಅನೇಕರು ಇದ್ದರು.