ಭಾರತದಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಆಪ್ತರಿಗೆ ಬೇವು ಬೆಲ್ಲ ಹಂಚುವ ಮೂಲಕ ಜೀವನದಲ್ಲಿ ಸಿಹಿ – ಕಹಿ ಎರಡು ಸಮಾನವಾಗಿ ಸ್ವೀಕರಿಸಿ ಎಂದು ಸಾರುವ ಹಬ್ಬ ಇದಾಗಿದೆ. ಯುಗಾದಿಯಂದು ವಿವಿಧ ಬಗೆಯ ಪಾಯಸ, ಒಬ್ಬಟ್ಟು ಬಗೆ ಬಗೆಯ ಅಡುಗೆಯ ಜೊತೆಗೆ ಪಚಡಿ ಎಂಬ ವಿಶೇಷ ರೆಸಿಪಿ ತಯಾರಿಸಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಇದನ್ನು ಹೆಚ್ಚು ತಯಾರಿಸುತ್ತಾರಾದರೂ ಕರ್ನಾಟಕ ಕೆಲವು ಭಾಗದಲ್ಲಿ ಯುಗಾದಿಗೆ ಪಚಡಿ ತಯಾರಿಸುವ ಕ್ರಮವಿದೆ.

ಪಚಡಿ ಎಂದರೇನು ?
ಪಚಡಿ ಎಂಬುದು ಯುಗಾದಿಗೆ ವಿಶೇಷವಾಗಿ ತಯಾರಿಸಲಾಗುವ ಖಾದ್ಯವಾಗಿದೆ, ಇದು 6 ಭಿನ್ನ ರುಚಿ ಹೊಂದಿರುತ್ತದೆ. ಸಿಹಿ, ಹುಳಿ, ಉಪ್ಪು, ಮಸಾಲೆ, ಒಗರು ಹಾಗೂ ಕಹಿ ರುಚಿಯನ್ನು ಹೊಂದಿರುವ ಪಾನೀಯ ರೂಪದ ತಿನಿಸು ಇದಾಗಿದೆ. ಯುಗಾದಿಯಂದು ಮೊದಲು ಸೇವಿಸುವ ಖಾದ್ಯ ಇದಾಗಿದೆ. ಯುಗಾದಿ ಪಚಡಿ ಆರೋಗ್ಯಕ್ಕೆ ಉತ್ತಮ. ಇದಕ್ಕೆ ಬಳಸುವ ಎಲ್ಲಾ ಪದಾರ್ಥಗಳು ವಿಶೇಷ, ಆರೋಗ್ಯಕ್ಕೆ ಪ್ರಯೋಜನ ಹೊಂದಿವೆ. ಹಾಗಿದ್ದರೆ ಆರೋಗ್ಯಕರ ಪಚಡಿ ತಯಾರಿಸುವುದು ಹೇಗೆ ಎಂಬುದು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು
ನೀರು – ಒಂದುವರೆ ಕಪ್
ಮಾವಿನಕಾಯಿ – 2 ರಿಂದ 3 ಚಮಚ (ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಬೇಕು)
ಬೇವಿನ ಹೂ – ಸ್ವಲ್ಪ
ಉಪ್ಪು – ರುಚಿಗೆ
ಬೆಲ್ಲ – 3 ರಿಂದ 4 ಚಮಚ
ಕಾಳಮೆಣಸಿನ ಪುಡಿ – ಚಿಟಿಕೆ
ಹುಣಸೆರಸ – ಒಂದುವರೆ ಚಮಚ

ತಯಾರಿಸುವ ವಿಧಾನ
- ಮೊದಲಿಗೆ ಹುಣಸೆಹಣ್ಣು ನೆನೆಸಿ, ರಸ ತಯಾರಿಸಿಟ್ಟುಕೊಳ್ಳಿ.
- ತಾಜಾ ಬೇವಿನ ಹೂಗಳನ್ನು ಬಿಡಿಸಿ ಇಟ್ಟುಕೊಳ್ಳಿ. ಬೇವಿನ ಹೂ ದೊಡ್ಡದಿದ್ದರೆ ಚಿಕ್ಕದಾಗಿ ಹೆಚ್ಚಿಕೊಳ್ಳಬಹುದು.
- ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಬೆಲ್ಲದ ಪುಡಿ ಸೇರಿಸಿ, ಬೆಲ್ಲ ಕರಗುವವರೆಗೂ ಕೈಯಾಡಿಸಿ. ಈ ನೀರನ್ನು ಒಂದು ಪಾತ್ರೆಗೆ ಸೋಸಿ, ನಂತರ ಅದೆ ಪಾತ್ರೆಗೆ ಹುಣಸೆ ರಸವನ್ನು ಸೋಸಿ ಹಾಕಿ. ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಇದನ್ನು ದೇವರಿಗೆ ನೈವೇದ್ಯ ಮಾಡಿ, ನಂತರ ಮನೆಯವರೆಲ್ಲರಿಗೆ ಹಂಚಿ.