SBI ಬ್ಯಾಂಕ್ ದರೋಡೆ ಪ್ರಕರಣ: 12.96 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ 5 ಆರೋಪಿಗಳ ಬಂಧನ

ರಾಜ್ಯ

ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 12.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದ 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಅಜಯಕುಮಾರ, ವಿಜಯಕುಮಾರ, ನ್ಯಾಮತಿಯ ಮಂಜುನಾಥ, ಹೊನ್ನಾಳಿಯ ನಿವಾಸಿ ಅಭಿಷೇಕ ಹಾಗೂ ಚಂದ್ರಶೇಖರ ಬಂಧಿತ ಆರೋಪಿಗಳು‌.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್ ಕಿಟಕಿಯ ಸರಳನ್ನು ಮುರಿದು, 12.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗುವಾಗ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿ (ಖಾರದ ಪುಡಿ) ಚೆಲ್ಲಿ ಎಸ್ಕೇಪ್ ಆಗಿದ್ದರು.

ಪೊಲೀಸ್ ಇಲಾಖೆಗೆ ದರೋಡೆಕೋರರನ್ನು ಪತ್ತೆ ಹಚ್ಚುವದು ದೊಡ್ಡ ತಲೆನೋವಾಗಿತ್ತು. ಎಸ್‌ಪಿ ಉಮಾ ಪ್ರಶಾಂತ ಹಾಗೂ ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ತನಿಖೆ ನಡೆಸಿದಾಗ ದರೋಡೆಕೋರರ ಪತ್ತೆಯಾಗಿದ್ದು, ಮೂವರು ಸ್ಥಳೀಯರು ಸೇರಿ ಒಟ್ಟು 5 ಜನ ದರೋಡೆಕೋರರನ್ನು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡು ಮೂಲದ ಪರಮಾನಂದ ಎನ್ನುವ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಸದ್ಯ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆರೋಪಿಗಳು ದರೋಡೆ ಮಾಡಲು ನ್ಯಾಮತಿಯಲ್ಲಿ ಬೇಕರಿ ಹಾಕಿಕೊಂಡು ಹಲವು ವರ್ಷಗಳಿಂದ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಪೊಲೀಸರು ಕೆಲ ತಾಂತ್ರಿಕ ಸಾಕ್ಷ್ಯಧಾರದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ದರೋಡೆ ಪ್ರಕರಣ ಹೊರಬಂದಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ದರೋಡೆ ಮಾಡಿದ ಚಿನ್ನಾಭರಣ ಎಲ್ಲಿದೆ ? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ‌.

Leave a Reply

Your email address will not be published. Required fields are marked *