ಚಿತ್ತಾಪುರ: 10ನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮಹತ್ವದ ಘಟ್ಟ. ಸೂಕ್ತ ತಯಾರಿ ಮಾಡಿಕೊಂಡರೆ ಎಂತಹ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಆರ್.ಜೆ ಕಾಲೇಜಿನ ಪ್ರಾಚಾರ್ಯ ಡಾ. ಪ್ರಲ್ಹಾದ್ ಬರ್ಲಿ ಹೇಳಿದರು.
ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 10ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸು ಬೇರೆಡೆಗೆ ಸೆಳೆಯುವ ಆಕರ್ಷಣೆ ಇದ್ದರು ಕೂಡ ಲೆಕ್ಕಿಸದೆ ಓದಿನ ಕಡೆಗೆ ಮಾತ್ರ ಗಮನಹರಿಸಿ ಅಧ್ಯಯನ ಮಾಡಿದರೆ, ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದರು.
ನಿಮ್ಮ ಮೇಲೆ ಶಾಲೆ ಮತ್ತು ಪಾಲಕರ ನಿರೀಕ್ಷೆಗಳಿವೆ ಅವುಗಳನ್ನು ಅರ್ಥಮಾಡಿಕೊಳ್ಳಬೇಕು. ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನಕೊಟ್ಟು ಓದಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು, ಮೊಬೈಲ್ – ಟಿವಿಯಿಂದ ದೂರವಿರಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಧಾ ರಾಠೋಡ ಮಾತನಾಡಿದರು. ಮಹೇಶ, ವೈಷ್ಣವಿ ಮತ್ತು ಚೈತನ್ಯ ಅನಿಸಿಕೆ ವ್ಯಕ್ತಪಡಿಸಿದರು.
10ನೇ ತರಗತಿಯ ಮಕ್ಕಳಿಗೆ ಪ್ಯಾಡು, ಪೆನ್ನು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು, ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಸದಸ್ಯ ಸಿದ್ದಲಿಂಗೇಶ ಜ್ಯೋತಿ, ಪ್ರಾಚಾರ್ಯ ಕೆ.ಐ ಬಡಿಗೇರ, ಮುಖ್ಯಗುರು ವಿದ್ಯಾಧರ ಖಂಡಳ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ವಿದ್ಯಾರ್ಥಿನಿ ಅಕ್ಷತಾ ನಿರೂಪಿಸಿದರು, ಸ್ನೇಹ ವಂದಿಸಿದರು.