ರಾವೂರ: ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಬೆಳೆಸುವ ಕೆಲಸ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಿ ಮಾಡುತ್ತಿದೆ ಎಂದು ಎಸಿಸಿಯ ಸಿ ಎಸ್ ಆರ್ ಕ್ಲಸ್ಟರ್ ಹೆಡ್ ಕೋಟೇಶ್ವರರಾವ ಹೇಳಿದರು.
ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಂಸ್ಕಾರ ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಸಿಗದೆ ವಿಚಿತ್ರ ಪೀಳಿಗೆ ಹುಟ್ಟುತ್ತಿದೆ. ಸಮಾಜದಲ್ಲಿ ಇಂತಹ ಪೀಳಿಗೆ ಸಮಾಜಘಾತುಕ ಚಟುವಟಿಕೆ ಮಾಡುತ್ತಿವೆ. ಸಂಸ್ಕಾರದ ಕೊರತೆಯಾದಲ್ಲಿ ಸಮಾಜ ಹಾಳಾಗುತ್ತದೆ. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ, ನಮ್ಮ ಭಾಗದಲ್ಲಿ ಮಕ್ಕಳ ಸರ್ವಾoಗಿಣ ವಿಕಾಸದ ಜೊತೆಗೆ ಉತ್ತಮ ಸಂಸ್ಕಾರವನ್ನು ಈ ಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇಲ್ಲಿ ಕಲಿತಿರುವ ಅನೇಕ ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಅಂಕಗಳಿಕೆಯೇ ನಮ್ಮ ಶಿಕ್ಷಣವಾಗಬಾರದು ಬದಲಾಗಿ ನಮ್ಮಲ್ಲಿನ ವರ್ತನೆ ಬದಲಾಯಿಸಬೇಕು ಎಂದರು.
ಹೊನ್ನಕಿರಣಿಗಿಯ ಚಂದ್ರಗುoಡ ಶಿವಾಚಾರ್ಯರು ಹಾಗೂ ರಾವೂರ ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಸಿಂಪಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯ ಸಿದ್ದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಿತ್ರಾ ತುಮಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ ವೇದಿಕೆ ಮೇಲೆ ಇದ್ದರು.

3 ಗಂಟೆಗಳ ಕಾಲ ಮಕ್ಕಳಿಂದ ಮಲ್ಲಕಂಬ, ಗೋಪುರ ರಚನೆ, ಯೋಗಾಸನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು.

ಮಲ್ಲಕಂಬಕ್ಕೆ ಮನಸೋತು ದೇಣಿಗೆ
ಸಂಸ್ಥೆಯ ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾದ ಮಕ್ಕಳ ರೋಮಾಂಚನಕಾರಿ ಮಲ್ಲಕಂಬ ನೋಡಿ ಮನಸೋತ ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಶಿಲ್ಪಿ ಅವರು ಸ್ಥಳದಲ್ಲಿಯೇ ಹತ್ತು ಸಾವಿರ ರೂ ದೇಣಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಶಿವಲಿಂಗಪ್ಪ ವಾಡೆದ, ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ, ಜಾಕಿರ್ ಹುಸೇನ್, ಗಣ್ಯರಾದ ಗುರುನಾಥ ಗುದಗಲ್, ಸತೀಶ್ ಸಗರ, ದೇವಿoದ್ರ ತಳವಾರ, ಶರಣು ಜ್ಯೋತಿ. ಚಂದ್ರು ಹಾವೇರಿ,ಕಾಂತಪ್ಪ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಕ್ಷಕ ಸಿದ್ದಲಿಂಗ ಬಾಳಿ ಸಂಸ್ಥೆಯ ವರದಿ ವಾಚನ ಮಾಡಿದರು, ಈಶ್ವರ ಬಾಳಿ ಸ್ವಾಗತಿಸಿದರು, ಕಾರ್ಯಕ್ರಮವನ್ನು ಈಶ್ವರಗೌಡ ಪಾಟೀಲ ಹಾಗೂ ಭುವನೇಶ್ವರಿ ಎಂ ಕಾರ್ಯಕ್ರಮ ನಿರೂಪಿಸಿದರು.
.