ಕೌನ್ ಬನೇಗಾ ಕರೋಡ್​ಪತಿಯಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆಯ ಬಡ ಯುವಕ

ಸುದ್ದಿ ಸಂಗ್ರಹ ವಿಶೇಷ

ಜ್ಞಾನವೇ ಎಲ್ಲದಕ್ಕಿಂತ ಮಿಗಿಲಾದ ಐಶ್ವರ್ಯಾ ಎಂಬ ಮಾತಿದೆ. ಕೇವಲ ಜ್ಞಾನದಿಂದಲೇ ಬಡ ಕಾರ್ಮಿಕನ ಮಗನೊಬ್ಬ ಈಗ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದಾನೆ. ಬಡ ವೆಲ್ಡರ್ ಕಾರ್ಮಿಕನ ಮಗನೊಬ್ಬ ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ.

ಅಷ್ಟಕ್ಕೂ ಈ ಯುವಕ ಬೇರೆ ಯಾವುದೋ ರಾಜ್ಯದವನಲ್ಲ. ನಮ್ಮದೆ ಕರ್ನಾಟಕದ ಬಾಗಲಕೋಟೆಯವನು.

ಬಾಗಲಕೋಟೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮ್​ಜಾನ್ ಮಲಿಕ್ ಬಾಬ್ ಫೀರಜಾದೆ, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಬಲು ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯ ಹಂತದವರೆಗೆ ಏರಿದ ಅವರು ಒಂದರ ಮೇಲೊಂದು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, 50 ಲಕ್ಷ ರೂ ಗೆದ್ದು ಬಂದಿದ್ದಾರೆ.

ಯುವಕ ರಮ್​ಜಾನ್ ಮಲ್ಲಿಕ್ ಅವರ ತಂದೆ ಮಹಾಲಿಂಗಪುರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಾರೆ. ರಮ್​ಜಾನ್ ಸಹ ತಂದೆಗೆ ಸಹಾಯ ಮಾಡುತ್ತಿದ್ದರು. ಬಡ ಕುಟುಂಬವಾದ್ದರಿಂದ ಕುಟುಂಬಕ್ಕೆ ಸಹಾಯ ಮಾಡಲು ಚಹಾ ಅಂಗಡಿಯಲ್ಲಿ ಲೊಟ ತೊಳೆಯುವ ಕೆಲಸ. ಬ್ಯಾಡ್​ಮಿಂಟನ್ ಕೋರ್ಟ್​ನ ವಾಚ್​ಮ್ಯಾನ್ ಹೀಗೆ ಹಲವು ರೀತಿಯ ಚಿಕ್ಕ ಪುಟ್ಟ ಕೆಲಸ ಮಾಡುತ್ತಾ ಬಿಎ ಮುಗಿಸಿದ್ದಾರೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗ ಕೌನ್ ಬನೇಗಾ ಕರೋಡ್​ಪತಿಗೆ ಅರ್ಜಿ ಹಾಕಿದ್ದ ರಮ್​ಜಾನ್​ಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದೆ.

ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡಿರುವ ರಮ್​ಜಾನ್, ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ಆಡಿ, ಅಮಿತಾಬ್ ಬಚ್ಚನ್ ಕೇಳಿದ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ 50 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ. ಅಸಲಿಗೆ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ್ದರೆ ಒಂದು ಕೋಟಿ ರೂಪಾಯಿ ಹಣ ಸಿಕ್ಕಿರುತ್ತಿತ್ತು. ಆದರೆ ಆ ಪ್ರಶ್ನೆಯ ಉತ್ತರದ ಮೇಲೆ ಅನುಮಾನ ಇದ್ದ ಕಾರಣ ರಮ್​ಜಾನ್ ಅವರು ಆಟದಿಂದ ನಿವೃತ್ತಿ ಹೊಂದಿ 50 ಲಕ್ಷ ರೂ ಹಣವನ್ನು ಗೆದ್ದು ಬೀಗಿದ್ದಾರೆ.

ಕೌನ್ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಗೆದ್ದು ಬಂದ ರಮ್​ಜಾನ್ ಅವರನ್ನು ಊರ ಜನ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಹಾರ ತುರಾಯಿ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ರಮ್​ಜಾನ್, ಕೌನ್ ಬನೇಗಾ ಕರೋಡ್​ಪತಿಯಲ್ಲಿ ಗೆದ್ದು ‘ಸ್ಲಂ ಡಾಗ್ ಮಿಲೇನಿಯರ್’ ಕತೆಯನ್ನು ನಿಜ ಮಾಡಿದ್ದಾರೆ.

Leave a Reply

Your email address will not be published. Required fields are marked *