ಸುದ್ದಿ ಸಂಗ್ರಹ ಸೇಡಂ
ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿಯೊಬ್ಬರು ಪತಿಯನ್ನೆ ಹತೈಗೈದ ಘಟನೆ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ.
ಮಳಖೇಡ ಗ್ರಾಮದ ಸಿದ್ರಾಮ ಪಾಟೀಲ (40) ಕೊಲೆಯಾದ ವ್ಯಕ್ತಿ.
ನವೆಂಬರ್ 2ರಂದು ಬೆಂಗಳೂರಿಗೆ ಹೊರಟಿದ್ದ ತಾಯಿಯನ್ನು ಸೇಡಂ ರೈಲು ನಿಲ್ದಾಣದಲ್ಲಿ ಬಿಟ್ಟುಬಂದ ಸಿದ್ರಾಮ ಪಾಟೀಲ ಮರಳಿಬಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗಾಗುವಷ್ಟರಲ್ಲಿ ರಕ್ತದ ಗಾಯಗಳಾಗಿದ್ದು, ಪತಿ ನಿಧನರಾಗಿದ್ದಾರೆ ಎಂದು ಅತ್ತೆ ಬಸಲಿಂಗಮ್ಮ ಅವರಿಗೆ ಪತ್ನಿ ತಿಳಿಸಿದ್ದರು. ಬೆಂಗಳೂರಿನಿಂದ ನ.3ರಂದು ರಾತ್ರಿ ಮರಳಿದ್ದ ಬಸಲಿಂಗಮ್ಮ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಳಖೇಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬಸಲಿಂಗಮ್ಮ ಮಾಡಗಿ ಅವರ ದೂರು ಆಧರಿಸಿ ಸಿಪಿಐ ಮಹಾದೇವ ದಿಡ್ಡಿಮನಿ ನೇತೃತ್ವದಲ್ಲಿ ಮಳಖೇಡ ಪಿಎಸ್ಐ ಶರಣಪ್ಪ ಜಾಕನಳ್ಳಿ ಮತ್ತು ಪೊಲೀಸರು ತನಿಖೆ ನಡೆಸಿದ್ದರು. ಕೊಲೆಯಾದ ವ್ಯಕ್ತಿಯ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ತಾನು ಮತ್ತು ಚಿತ್ತಾಪುರದ ಮಾರುತಿ ಭೋವಿ ಸೇರಿಕೊಂಡು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ ಸಾಕ್ಷ್ಯಿ ನಾಶ ಮಾಡಲು ಸಿದ್ರಾಮ ಪಾಟೀಲ ಅವರ ಬಟ್ಟೆಗಳನ್ನು ಚಿತ್ತಾಪುರ ರಸ್ತೆ ಮಾರ್ಗದಲ್ಲಿ ಬೀಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಕಥೆ ಕಟ್ಟಿದ ಅಂಬಿಕಾ: ಪತ್ನಿ ಅಂಬಿಕಾ ತನ್ನ ಪತಿ ಸಿದ್ರಾಮ ಸೋಮವಾರ ರಾತ್ರಿ ಗೆಳೆಯರೊಂದಿಗೆ ಊಟಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಬೆಳಗಿನ ಜಾವ ಮನೆಗೆ ಬಂದಾಗ ಗಾಯಗಳಾಗಿದ್ದವು. ಏನು ಎಂದು ಕೇಳಿದಾಗ ಸ್ವಲ್ಪ ಜಗಳವಾಗಿದೆ. ನನಗೆ ನಿದ್ರೆಯಾಗಿಲ್ಲ, ಮಲಗುತ್ತೆನೆ ಎಬ್ಬಿಸಬೇಡ ಎಂದು ಹೇಳಿ ಮಲಗಿದಾಗ ಶವವಾಗಿದ್ದಾರೆ ಎಂದು ಸುಳ್ಳು ಕಥೆ ಸೃಷ್ಟಿಸಿ ಎಲ್ಲರನ್ನು ನಂಬಿಸಿದ್ದಳು. ತನಿಖೆ ಕೈಗೊಂಡ ಪಿಎಸ್ಐ ಶರಣಪ್ಪ ಜಾಕನಳ್ಳಿ ತಂಡ, ಮೊಬೈಲ್ ಮತ್ತು ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ರಹಸ್ಯ ಬಯಲಾಗಿದೆ.
ಆರೋಪಿಗಳಾದ ಅಂಬಿಕಾ ಮತ್ತು ಆಕೆಯ ಪ್ರಿಯಕರ ಮಾರುತಿಯನ್ನು ಸ್ಥಳಕ್ಕೆ ಕರೆತಂದು ಪೊಲೀಸರು ಪಂಚನಾಮೆ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿದ್ರಾಮ ಪಾಟೀಲ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಸೇಡಂ ಸಿಪಿಐ ಮಹಾದೇವ ದಿಡ್ಡಿಮನಿ ಮಾತನಾಡಿ, ಕೊಲೆಯಾದ ಕುಟುಂಬದಲ್ಲಿ ಪತ್ನಿ ಅಂಬಿಕಾ ಅವರ ಮೇಲೆ ಸಂಶಯವಿದ್ದರಿಂದ ನಮ್ಮ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಪ್ರಕರಣದಲ್ಲಿ ಯಾರ ಒತ್ತಡವಿಲ್ಲದೆ, ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.