ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ, ಮೋದಿ ಆಡಳಿತಕ್ಕೆ ಐತಿಹಾಸಿಕ ಜಯ: ಡಾ. ಉಮೇಶ್ ಜಾಧವ
ಕಲಬುರಗಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ತನ್ನ ಪಾರಮ್ಯ ಸಾಧಿಸಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಪಕ್ಷದ ಮತ ಶೇಕಡಾವಾರು ಗಣನೀಯವಾಗಿ ಹೆಚ್ಚಿರುವುದು ಜನಾಭಿಪ್ರಾಯದ ಸ್ಪಷ್ಟ ಸಂಕೇತವಾಗಿದೆ ಎಂದರು.
ತಮಿಳುನಾಡಿನಲ್ಲಿ ಸನಾತನ ವಿರೋಧಿ ನಿಲುವು ಹೊಂದಿದ ಆಡಳಿತದ ವಿರುದ್ಧ ಜನತೆ ತಿರಸ್ಕಾರ ವ್ಯಕ್ತಪಡಿಸಿದ್ದು, ದ್ರಾವಿಡ ಮುನ್ನೇತ್ರ ಕಳಗಂ (DMK) ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪಕ್ಷದ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರ ಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕೀಯಕ್ಕೆ ಅಂತ್ಯವಾಗುವ ನೂತನಯುಗ ಆರಂಭವಾಗಲಿದ್ದು, ಶಾಂತಿ, ಅಭಿವೃದ್ಧಿ ಮತ್ತು ರಾಷ್ಟ್ರೀಯ ಏಕತೆಗೆ ಇದು ಪೂರಕವಾಗಲಿದೆ ಎಂದು ಹೇಳಿದರು.
ಈ ಫಲಿತಾಂಶವು ಸಂವಿಧಾನ ವಿರೋಧಿ ಶಕ್ತಿಗಳಿಗೆ ಮತದಾರರು ನೀಡಿದ ತಕ್ಕ ಉತ್ತರವಾಗಿದ್ದು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳನ್ನು ಹಿಂಬದಿಗೆ ಸರಿಸಿದೆ ಎಂದರು.
ರಾಜ್ಯದ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ವೀರೋಚಿತ ಸೋಲು ಕಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಹಣ ಮತ್ತು ಅಧಿಕಾರದ ದುರುಪಯೋಗದಿಂದ ಜಯ ಸಾಧಿಸಿದೆ ಎಂದು ಆರೋಪಿಸಿದರು.
- ಲೋಕಸಭಾ ಮಾಜಿ ಸದಸ್ಯ ಡಾ.ಉಮೇಶ್ ಜಾಧವ