ಸುದ್ದಿ ಸಂಗ್ರಹ ಬೆಂಗಳೂರು
ಪ್ರವಾಹ, ಭೂಕಂಪ, ಅತಿವೃಷ್ಟಿ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಮತ್ತು ತುರ್ತು ಸಂದರ್ಭದಲ್ಲಿ ನಾಗರಿಕರ ಮೊಬೈಲ್‌ಗೆ ನೇರವಾಗಿ ಎಚ್ಚರಿಕೆ ಸಂದೇಶ ಬಿತ್ತರಿಸುವ ‘ಸೆಲ್ ಬ್ರಾಡ್‌ಕಾಸ್ಟಿಂಗ್ ಅಲರ್ಟ್’ ಸೇವೆಯ ಆರಂಭಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಬೆಂಗಳೂರು ನಾಗರಿಕರ ಮೊಬೈಲ್‌ಗಳಿಗೆ ಮೇ 2 ಶನಿವಾರದಿಂದ ಎಚ್ಚರಿಕೆ ಸಂದೇಶ ಬರಲಿದೆ.
ಆತಂಕ ಬೇಕಿಲ್ಲ: ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಮ್ಮ ಭಾಗದಲ್ಲಿ 2026ರ ಮೇ 2ರಂದು ‘ಸೆಲ್ ಬ್ರಾಡ್‌ಕಾಸ್ಟಿಂಗ್ ಅಲರ್ಟ್’ ತಾಂತ್ರಿಕ ಪರೀಕ್ಷೆ ನಡೆಸುತ್ತಿದೆ. ನಿಮ್ಮ ಮೊಬೈಲ್‌ಗೆ ಈ ಸಂದೇಶ ಬಂದಾಗ, ಯಾರು ಯಾವ ಕ್ರಮ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಯಾರು ಆತಂಕಕ್ಕೆ ಒಳಗಾಗಬಾರದು’ ಎಂಬ ವಿವರ ಇರುವ ಸಂದೇಶ ಬಿತ್ತರವಾಗಲಿದೆ.
ಈ ವ್ಯವಸ್ಥೆ ಪೂರ್ಣ ಅನುಷ್ಠಾನಕ್ಕೆ ಬಂದ ನಂತರ, ಮೊಬೈಲ್‌ನಲ್ಲಿ ಬಿತ್ತರವಾಗುವ ಎಚ್ಚರಿಕೆ ಸಂದೇಶಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕಾಗುತ್ತದೆ.
- ಪ್ರಾಕೃತಿಕ ವಿಕೋಪ ಅಥವಾ ತುರ್ತು ಸಂದರ್ಭಕ್ಕೆ ಗುರಿಯಾದ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿರುವ ಎಲ್ಲ ಮೊಬೈಲ್/ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ.
- 2ಜಿ, 3ಜಿ, 4ಜಿ ಮತ್ತು 5ಜಿ ಸಿಮ್ ಇರುವ ಮೊಬೈಲ್‌ಗಳಲ್ಲೂ ಈ ಎಚ್ಚರಿಕೆ ಸಂದೇಶ ಬಿತ್ತರ.
- ಇದಕ್ಕಾಗಿ ಮೊಬೈಲ್ ಮತ್ತು ಸ್ಮಾರ್ಟ್‌ಪೋನ್‌ಗಳಲ್ಲಿ ಯಾವುದೆ ಹೆಚ್ಚುವರಿ ಆ್ಯಪ್ ಅಳವಡಿಸುವ ಅವಶ್ಯಕತೆ ಇಲ್ಲ. ಇಂಟರ್‌ನೆಟ್ ಸಂಪರ್ಕದ ಅಗತ್ಯವೂ ಇಲ್ಲ.
- ಈ ವ್ಯವಸ್ಥೆಯು ದೂರಸಂಪರ್ಕ ಕಂಪನಿಗಳ ನೆಟ್‌ವರ್ಕ್ ಗೋಪುರಗಳ (ಟವರ್) ಮೂಲಕ ಕಾರ್ಯನಿರ್ವಹಿಸಲಿದೆ. ಅಲ್ಲಿಂದ ಬಿತ್ತರವಾಗುವ ಸಂದೇಶಗಳನ್ನು ಸ್ವೀಕರಿಸಲು ಮೊಬೈಲ್/ ಸ್ಮಾರ್ಟ್‌ಪೋನ್‌ನಲ್ಲಿ ಇರುವ ಸಿಮ್ ಚಾಲ್ತಿಯಲ್ಲಿ ಇರಬೇಕು.
ತುರ್ತು ಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಗುರಿ ಹೊಂದಿರುವ ಈ ಮಹತ್ವದ ಸಂವಹನ ವ್ಯವಸ್ಥೆಯ ಪ್ರಾಯೋಗಿಕ ಚಾಲನೆ ವೇಳೆ ಎಲ್ಲ ನಾಗರಿಕರು ಸಹಕರಿಸಬೇಕು.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ