ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಿಯಾಂಕ್ ಖರ್ಗೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದ್ದು, ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಿರಿಯ ಪತ್ರಕರ್ತ ದಿ.ನಾಗಯ್ಯಸ್ವಾಮಿ ಅಲ್ಲೂರ್ ಅವರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ನಾಗಾವಿ ನಕ್ಷತ್ರ’ ಸಂಸ್ಮರಣ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾಗಯ್ಯಸ್ವಾಮಿ ಅಲ್ಲೂರ್ ಅವರು ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದರು. ಪ್ರಾಮಾಣಿಕತೆ ಅವರನ್ನು ಕೇವಲ ಪತ್ರಿಕಾರಂಗಕ್ಕೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ, ಸಾಹಿತ್ಯ ಲೋಕದಲ್ಲೂ ನಿಷ್ಠಾವಂತರಾಗಿದ್ದರು. ಸಾಮಾನ್ಯ ಜನರಿಗೆ ಮತ್ತು ಮಕ್ಕಳಿಗೆ ಅವರು ಮಾಡಿದ ಸೇವೆ ಅನನ್ಯ ಎಂದರು‌.

ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ ಅವರು, ನಾಗಯ್ಯಸ್ವಾಮಿಯಂತಹ ಪತ್ರಕರ್ತರು‌ ಸಮಾಜದ ಎಲ್ಲಾ ವರ್ಗದವರಿಗೆ ಮಾದರಿಯಾಗಿದ್ದಾರೆ. ಅವರ ಗೆಳೆಯರ ಬಳಗ ಅವರ ಜೀವನ ಮತ್ತು ಸಾಧನೆ ದಾಖಲಿಸುವ ಉದ್ದೇಶದಿಂದ “ನಾಗಾವಿ ನಕ್ಷತ್ರ” ಎಂಬ ಸಂಸ್ಮರಣ ಗ್ರಂಥ
ಹೊರತಂದಿರುವುದು ಶ್ಲಾಘನೀಯ ಎಂದರು.

ನಾಗಯ್ಯಸ್ವಾಮಿ ಅವರ ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ವೇದಿಕೆಯ ಮೇಲಿದ್ದ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಗೆಳೆಯರ ನೆರವಿನ ಜೊತೆಗೆ ತಾವು ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಚಿತ್ತಾಪುರದಲ್ಲಿ ನಡೆದ‌ ಕನ್ನಡ ಸಾಹಿತ್ಯ ಸಮ್ಮೇಳದ ಮೆಲುಕು ಹಾಕಿದ ಸಚಿವರು ಆ ಸಂದರ್ಭದಲ್ಲಿ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸಮ್ಮೇಳನದ ಖರ್ಚು ವೆಚ್ಚಗಳ ಬಗ್ಗೆ ಪ್ರತಿಯೊಂದು ವಿವರ ನನಗೆ ಒದಗಿಸಿದ್ದರು. ಅಂತಹ ನಿಷ್ಠೆ ಮತ್ತು ಪ್ರಾಮಾಣಿಕತೆ ಅವರಲ್ಲಿತ್ತು ಎಂದರು.

ಕಾರ್ಯಕ್ರಮದಲ್ಲಿ ಹಲಕರ್ಟಿ ಕಟ್ಟಿಮನಿ ಮಠದ ಶ್ರೀ ಮುನೀಂದ್ರ ಶಿವಾಚಾರ್ಯ, ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿದರು.

ಸಂಸ್ಮರಣ ಗ್ರಂಥದ ಪ್ರಧಾನ ಸಂಪಾದಕ ಲಿಂಗಪ್ಪ ಮಲ್ಕನ್ ಪ್ರಾಸ್ತಾವಿಕ ಮಾತನಾಡಿದರು.

ಸ್ನೇಹಿತರ ವಲಯದಲ್ಲಿ ಸಂಗ್ರಹಿಸಲಾದ 1.90 ಲಕ್ಷ ರೂ. ಚೆಕ್ ಅನ್ನು‌ ಸಚಿವರು ಕುಟುಂಬದವರಿಗೆ ವಿತರಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ ವೀರೇಂದ್ರಕುಮಾರ ಕೊಲ್ಲೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ, ಕಾಳಗಿ ತಾ.ಪಂ ಇಓ ಬಸಲಿಂಗಪ್ಪ ಡಿಗ್ಗಿ, ತೊಗರಿ ಮಂಡಳಿ ಅಧ್ಯಕ್ಷ ಮಹಿಮೂದ್ ಸಾಹೇಬ್, ಪತ್ರಕರ್ತರಾದ ಭವಾನಿ ಸಿಂಗ್ ಠಾಕೂರ್, ದೇವಿಂದ್ರಪ್ಪ ಅವಂಟಿ, ಪ್ರಮುಖರಾದ ಸಿದ್ದಮ್ಮ ನಾಗಯ್ಯಸ್ವಾಮಿ, ಲಿಂಗಾರೆಡ್ಡಿ ಬಾಸರೆಡ್ಡಿ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಅವಂಟಿ, ಜಗಣ್ಣಗೌಡ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ಜಯಪ್ರಕಾಶ್ ಕಮಕನೂರ, ವೀರಭದ್ರಪ್ಪ ಗುರುಮಿಠಕಲ್, ಶಿವಾನಂದ ನಾಲವಾರ, ಉಮೇಶಬಾಬು, ಕಾಶಿರಾಯ ಕಲಾಲ್, ನಟರಾಜ ಶಿಲ್ಪಿ, ವೀರಸಂಗಪ್ಪ ಸುಲೇಗಾಂವ ಸೇರಿದಂತೆ ಅನೇಕ‌ ಮುಖಂಡರು, ಪತ್ರಕರ್ತರು, ಅಭಿಮಾನಿಗಳು ಮತ್ತು ಗೆಳೆಯ ಬಳಗದವರು ಇದ್ದರು.

ಕಾರ್ಯಕ್ರಮವನ್ನು ರಾಚಯ್ಯಸ್ವಾಮಿ ಅಲ್ಲೂರ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಪಿ, ವಂದಿಸಿದರು.

Leave a Reply

Your email address will not be published. Required fields are marked *