ನಾಲವಾರ ಜಾತ್ರಾ ಮಹೋತ್ಸವ: ತನಾರತಿ ಹೊತ್ತು ಹರಕೆ ಸಮರ್ಪಿಸಿದ ಭಕ್ತಸಾಗರ‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಕಲ್ಯಾಣ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ನಾಲವಾರದ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯುತ್ತಿದ್ದು, ನಾಡಿನ ವಿಶಿಷ್ಟ ಉತ್ಸವಗಳಲ್ಲೊಂದಾದ ತನಾರತಿ ಮಹೋತ್ಸವವು, ಸಹಸ್ರಾರು ಭಕ್ತರ ಮಧ್ಯೆ ಅವರಾತ್ರಿ ಅಮಾವಾಸ್ಯೆ ದಿನವಾದ ರವಿವಾರ ಮಧ್ಯರಾತ್ರಿ ಭಕ್ತಿ ಭಾವದಿಂದ ನೆರವೇರಿತು.

ದಕ್ಷಿಣ ಭಾರತದ ಮಹಾ ದೀಪಮೇಳವೆಂದೆ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು, ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.

ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ತನಾರತಿ ಉತ್ಸವವು ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅತ್ಯಂತ ವೈಭವದಿಂದ ನಡೆಯಿತು.

ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ, ಪುಷ್ಪಾಲಂಕೃತವಾಗಿ, ತನಾರತಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆಗಳು ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದರು.

ಪುರವಂತಿಕೆ,ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ನಡೆದ ಈ ಉತ್ಸವ ರವಿವಾರ ಮಧ್ಯರಾತ್ರಿ ಪ್ರಾರಂಭವಾಗಿ ಸೋಮವಾರ ಬೆಳಗಿನ ಜಾವದವರೆಗೂ ನಡೆಯಿತು.

ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆಗಳನ್ನು ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆ ಅನುಭವಿಸಿದರು.

ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆ ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠದ ಪಾರಂಪರಿಕ ಉತ್ಸವವಾಗಿದೆ‌.

ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ರೀತಿಯ ವೈಶಿಷ್ಟ್ಯ ಪೂರ್ಣ ಉತ್ಸವ ನಾಡಿನ ಯಾವುದೆ ಭಾಗದಲ್ಲಿ ಕಾಣಸಿಗುವುದಿಲ್ಲ.

ನಾಲವಾರದ ಜಾತ್ರಾ ಮಹೋತ್ಸವದ ತನಾರತಿ ಉತ್ಸವ ಮಹತ್ವದ್ದಾಗಿದ್ದು, ಜಾತಿ ಮತ ಪಂಥಗಳನ್ನು ಮರೆತು ಸಹಸ್ರಾರು ಭಕ್ತರು ಹರಕೆ ಸಮರ್ಪಿಸುವ ದೃಶ್ಯ ನಯನಮನೋಹರ ಮಾತ್ರವಲ್ಲದೆ ಆಸ್ತಿಕ ಮನಸ್ಸು ಭಕ್ತಿಭಾವದಲ್ಲಿ ತೇಲಾಡುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *