8ನೇ ಕ್ಲಾಸ್ ಓದಿದವನು ಲೋಕಾಯುಕ್ತ ಅಂತ ಹೇಳಿಕೊಂಡು ಮಹಿಳಾ ಆಧಿಕಾರಿಗೆ ಬ್ಲ್ಯಾಕ್‌ಮೇಲ್

ರಾಜ್ಯ

ಚಿಕ್ಕಬಳ್ಳಾಪುರ: 8ನೇ ತರಗತಿ ಓದಿದ ಯುವಕನೊರ್ವ ನಾನು ಲೋಕಾಯುಕ್ತ ಅಧಿಕಾರಿ ಅಂತ ಹೇಳಿಕೊಂಡು ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಅದರ ಪರಿಣಾಮ ಈಗ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿಯಾಗಿದ್ದಾನೆ.

ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್‌ಗೆ ಕರೆ ಮಾಡಿ ತಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ, ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಿರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ಬಂದಿದೆ. ನಿಮ್ಮ ಕಚೇರಿ ಮೇಲೆ ರೇಡ್ ಮಾಡ್ತಿವಿ ಅಂತ ಹೆದರಿಸಿದ್ದಾನೆ. ರೇಡ್ ಮಾಡಬಾರದು ಅಂದರೆ ನಾವು ಹೇಳಿದಷ್ಟು ದುಡ್ಡು ಅರ್ಧ ಗಂಟೆಯಲ್ಲಿ ಕೊಡಬೇಕು ಅಂತ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

ವಂಚಕನ ಮಾತುಗಳಿಗೆ ಹೆದರದ ಪೌರಾಯುಕ್ತೆ ಗೀತಾ ಚಿಕ್ಕಬಳ್ಳಾಪುರ ಲೋಕಾಯುಕ್ತ ಸಂಸ್ಥೆಯ ಎಸ್ಪಿಯೊಂದಿಗೆ ಮಾತನಾಡಿ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು 10 ತಿಂಗಳ ನಂತರ ಆರೋಪಿ ಚನ್ನಕೇಶವರೆಡ್ಡಿಯನ್ನು ಬಂಧಿಸಿದ್ದಾರೆ.

ಅಂದಹಾಗೆ ಈ ನಕಲಿ ಆಫೀಸರ್ ಓದಿರುವದು ಕೇವಲ 8ನೇ ತರಗತಿ ಮಾತ್ರ. ಆಂಧ್ರ ಬಿಟ್ಟು ಬೆಂಗಳೂರಿನಲ್ಲೆ ಬಿಡಾರ ಹೂಡಿದ್ದ ಈತ ರಾಜ್ಯದ ಹಲವು ಅಧಿಕಾರಿಗಳಿಗೆ ಇದೆ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಮಾಡಿರುವ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಈತನ ಜೊತೆಗೆ ಮತ್ತೊರ್ವ ಆರೋಪಿ ಧನುಷ್‌ ರೆಡ್ಡಿ ಸಹ ಕೃತ್ಯದಲ್ಲಿ ಭಾಗಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ.

ಅಸಲಿಗೆ ಈ ಕಿಲಾಡಿಗಳು ಯಾರದ್ದೋ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಆ ನಂಬರಿನಿಂದ ಅಧಿಕಾರಿಗಳನ್ನು ಹೆದರಿಸುತ್ತಿದ್ದರಂತೆ. ಒಂದು ಸಿಮ್‌ ನಿಂದ ಒಬ್ಬ ಅಧಿಕಾರಿಗೆ ಮಾತ್ರ ಕರೆ ಮಾಡುತ್ತಿದ್ದರಂತೆ, ಮತ್ತೊಬ್ಬ ಅಧಿಕಾರಿಗೆ ಆ ಸಿಮ್‌ ಕಾರ್ಡ್‌ ಬಳಸುತ್ತಿರಲಿಲ್ಲವಂತೆ. ಹಾಗಾಗಿ ಆರೋಪಿ ಹಿಡಿಯುವದು ಪೊಲೀಸರಿಗೆ ಸವಾಲಾಗಿತ್ತು. ಆದರೂ ಪಟ್ಟು ಬಿಡದ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *