ಸಂಭ್ರಮದ ಬಸವೇಶ್ವರ ಜಯಂತಿ ಆಚರಣೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕು ಆಡಳಿತದ ವತಿಯಿಂದ ಪ್ರಜಾಸೌಧ ಆವರಣದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ 893ನೇ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ರೈತರ ಜೋಡೆತ್ತುಗಳೊಂದಿಗೆ ಬಸವೇಶ್ವರರ ಭಾವಚಿತ್ರದ ಅದ್ದೂರಿ ಮರವಣಿಗೆಗೆ ಹಿರೇಮಠ ಚಾಲನೆ ನೀಡಿದರು.

ಹೂವಿನಿಂದ ಅಲಂಕೃತ ಸಾರೋಟದಲ್ಲಿ ಬಸವೇಶ್ವರ ಭಾವಚಿತ್ರವಿಟ್ಟು ಸಾಗಿದ ಮೆರವಣಿಗೆಯು ಪಟ್ಟಣದ ರೈಲ್ವೆ ನಿಲ್ದಾಣ, ನಾಗಾವಿ, ಜನತಾ, ಚಿತಾವಲಿ ಚೌಕ್ ಸೇರಿದಂತೆ ಕೆಳಗೇರಿಯವರೆಗೆ ನಡೆಯಿತು. ಭುವನೇಶ್ವರಿ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಲಾಡ್ಜಿಂಗ್ ಕ್ರಾಸ್, ಬಸವೇಶ್ವರರ ಅಶ್ವಾರೂಢ ಮೂರ್ತಿಯವರೆಗೆ ಜಯಘೋಷದ ನಡುವೆ ಬಾಜಾ ಭಜಂತ್ರಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಬಸವೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಅ.ಭಾ.ವೀ.ಲಿಂ ಮಹಾಸಭಾ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿಯಿಂದ ಕಲಬುರಗಿಯ ಮೆಡಿಕೇರ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಔಷಧ ವಿತರಣೆ ಶಿಬಿರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಅಧ್ಯಕ್ಷ ನಾಗರಾಜ ಬಂಕಲಗಿ, ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖರ ಪಾಟೀಲ ಬೆಳಗುಂಪಾ, ರಮೇಶ ಪಾಟೀಲ ಮರಗೋಳ, ಭೀಮಣ್ಣಾ ಸಾಲಿ, ಜಗಣ್ಣಗೌಡ ರಾಮತೀರ್ಥ, ಅಶೋಕ ನಿಪ್ಪಾಣಿ, ಶಾಂತಣ್ಣಾ ಚಾಳಿಕಾರ, ಅಣ್ಣಾರಾವ ಪಾಟೀಲ ಮುಡಬೂಳ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *