ಸುದ್ದಿ ಸಂಗ್ರಹ ಬೆಂಗಳೂರು
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ತೇವಾಂಶ ಭರಿತ ಮೋಡದ ಪರಿಣಾಮ ರಾಜ್ಯದ ಹಲವೆಡೆ ಮಾ.29ರವರೆಗೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಮಾ.25 ರಿಂದ ಮುಂದಿನ 2 ದಿನ ಹಾಗೂ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಾ.27ರಿಂದ ಮಾ.29ರವರೆಗೆ ವರ್ಷಧಾರೆಯಾಗಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಯಚೂರು, ವಿಜಯಪುರ, ವಿಜಯನಗರ ಮತ್ತು ಯಾದಗಿರಿಯಲ್ಲಿ ಮಾ.29ಕ್ಕೆ ಸಾಧಾರಣ ಮಳೆಯಾಗಲಿದೆ.
ತಾಪಮಾನ ಕುಸಿತ: ಬಿಸಿಲಿನ ಝಳಕ್ಕೆ ತತ್ತರಿಸಿದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಇಳಿಮುಖವಾಗಿದೆ. ಕಲಬುರಗಿಯಲ್ಲಿ 5.9, ಬೆಳಗಾವಿ, ಬೀದರ್, ಚಿತ್ರದುರ್ಗ, ಧಾರವಾಡ, ಮಂಡ್ಯ, ವಿಜಯಪುರದಲ್ಲಿ ತಲಾ 2.5 ಡಿ.ಸೆ ಉಷ್ಣಾಂಶ ಕುಸಿತವಾಗಿದೆ. ಮುಂದಿನ 5 ದಿನ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.