ಐತಿಹಾಸಿಕ, ಪುರಾತನ ಸ್ಥಂಭ ರಾಮಲಿಂಗೇಶ್ವರ ದೇವಾಲಯ ಅಭಿವೃದ್ಧಿಗೊಳಿಸಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಐತಿಹಾಸಿಕ, ಅಪರೂಪದ ವಾಸ್ತುಶಿಲ್ಪ ಹೊಂದಿರುವ, ಸುಮಾರು 1,400 ವರ್ಷಗಳ ಪ್ರಾಚೀನ ಕಾಲದ ‘ಕಲಬುರಗಿ ಗ್ರಾಮ ದೇವತೆ’ ಎಂದು ನಂಬಲ್ಪಟ್ಟ ಶಹಾಬಜಾರ ನಾಕಾ ಸಮೀಪದ ಸ್ಥಂಭ ರಾಮಲಿಂಗೇಶ್ವರ ದೇವಾಲಯ ಹಾಗೂ ಆವರಣದ ಸ್ಥಳ ಅಭಿವೃದ್ಧಿಗೊಳಿಸಿ, ಅದರ ಬಗ್ಗೆ ವ್ಯಾಪಕ ಪ್ರಚಾರವಾಗುವ ಕೆಲಸ ಜರುಗಬೇಕಾಗಿದೆ ಎಂದು ದೇವಸ್ಥಾನದ ಪೂಜ್ಯ ನಾಗೇಶ ಮಹಾರಾಜ ಸ್ವಾಮಿಜಿ ಹೇಳಿದರು.

ನಗರದ ಆಳಂದ ರಸ್ತೆಯ ಶಹಾಬಜಾರ ನಾಕಾ ಸಮೀಪದ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ’ ಕಾರ್ಯಕ್ರಮದಲ್ಲಿ ದೇವಸ್ಥಾನದ ವಾಸ್ತುಶಿಲ್ಪ ಕಲೆ ಆಗಮಿಸಿದ್ದ ಭಕ್ತರಿಗೆ ವಿವರಣೆ ನೀಡುತ್ತಾ ಮಾತನಾಡಿದ ಅವರು, ಈ ದೇವಸ್ಥಾನದಲ್ಲಿ ಬಹು ಪುರಾತನ ಸ್ಥಾವರಲಿಂಗವಿದೆ. ನಿರ್ಲಕ್ಷತನದಿಂದ ಸುತ್ತಲು ಗಿಡ-ಗಂಟೆ ಬೆಳೆದಿತ್ತು. ಅನೈತಿಕ ಚಟುವಟಿಕೆಗಳ ಸ್ಥಳವಾಗಿತ್ತು. ದೇವಾಲಯದ ಪರಿಸರ ಕಸದಿಂದ ತುಂಬಿತ್ತು. ನಾನು ದೇವಸ್ಥಾನದ ಮುಖ್ಯಸ್ಥನಾದ ಮೇಲೆ ಸುತ್ತ-ಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿ, ದೇವಸ್ಥಾನದ ಆವರಣದ ಸುಚಿತ್ವ ಕಾಪಾಡಿಕೊಂಡು ಬರಲಾಗುತ್ತಿದೆ. ಭಕ್ತರು ದೇವಸ್ಥಾನದ ಮಹಿಮೆ ಕಂಡು ಆಗಮಿಸುತ್ತಿದ್ದಾರೆ. ಪ್ರತಿ ಸೋಮವಾರ ಸಂಜೆ ದೀಪೋತ್ಸವ, ಶಿವರಾತ್ರಿ ದಿನದಂದು ವಿಶೇಷ ಕಾರ್ಯಕ್ರಮ ಜರುಗುತ್ತವೆ. ಐತಿಹಾಸಿಕ ದೇವಸ್ಥಾನವಾದ ಇದರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರ, ಸಂಬಂಧಿಸಿದವರು ಇದರತ್ತ ಲಕ್ಷ ವಹಿಸಬೇಕಾಗಾಗಿದೆ ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ನಮ್ಮ ಜಿಲ್ಲೆ ಸೇರಿದಂತೆ ದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿದ್ದು ಅವುಗಳ ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆ ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ. ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಬೇಕು. ಭವ್ಯವಾದ ಅನೇಕ ತಾಣ, ಸ್ಮಾರಕ ಸುಕ್ಷೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದ್ದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ರಾಷ್ಟ್ರದ ಅಭಿವರದ್ಧಿಗೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಜಗದೀಶ್ ದಾಳಿಮಕರ್, ಹರೀಶ್, ಭಾಗ್ಯಶ್ರೀ ಮಣುರೆ, ಸ್ನೇಹಾ ಕನಕುರಟೆ, ಲಕ್ಷ್ಮಿ ಠಾಕೂರ, ರೇಣುಕಾ ಸಿರಸಾಗರ, ಪ್ರಿಯಾಂಕಾ ರಂಗದಾಳ, ಶಿವರಾಜ ಪಾಟೀಲ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *