ಸುದ್ದಿ ಸಂಗ್ರಹ ಬೆಂಗಳೂರು
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಇಂದು ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 6ನೇ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ(ಬಿ) ಗ್ರಾಮದ 2,877 ಎಕರೆ ಅರಣ್ಯವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ನಿರ್ಧರಿಸಲಾಗಿದೆ.
ಬೆಟ್ಟ ಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ರಮಣೀಯವಾದ ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಈ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಯೋಗ್ಯವಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಿತು.
ಇದಕ್ಕೂ ಮುನ್ನ, ವನ್ಯಜೀವಿ ಸಂರಕ್ಷಣಾ ಕಾಯಿದೆ-1972ರ ಕಲಂ 36(ಎ) ರೀತ್ಯ ಸ್ಥಳೀಯ ಗ್ರಾಮ ಪಂಚಾಯತಿಯ ವಿಶೇಷ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಿ, ಸಂರಕ್ಷಿತ ಮೀಸಲು ಎಂದು ಘೋಷಿಸಲು ಸಮ್ಮತಿ ಪಡೆಯಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಉಳಿದಂತೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪರಿಸರ ಸೂಕ್ಷ್ಮ ವಲಯದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಹಂತ 1 ಪದವಿ ಕಾಲೇಜು ಆವರಣ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಆಯ್ದ ವನ್ಯಜೀವಿಗಳ ಸಂತಾನ ಹರಣಕ್ಕೆ ಚಿಂತನೆ- ಸಚಿವ ಖಂಡ್ರೆ: ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯ್ದ ವನ್ಯಜೀವಿಗಳ ಸಂತಾನಶಕ್ತಿಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತಿಸುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೂ ನಡೆಯಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಇತ್ತೀಚಿಗೆ ಅಭಿಪ್ರಾಯಪಟ್ಟಿದ್ದರು.
ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಕೆಲವು ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಇವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವೂ ಕಂಡುಬರುತ್ತಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವಹಾನಿಯೂ ತಪ್ಪಬೇಕು. ಮಾನವರ ಜೀವ ಉಳಿಸುವ ಕೆಲಸವೂ ಆಗಬೇಕಿದೆ ಎಂದಿದ್ದರು.
ಇದು ನಿರ್ಧಾರವಲ್ಲ, ಒಂದು ಚಿಂತನೆ ಮಾತ್ರ, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುವ ಅಗತ್ಯವಿದೆ. ಜೊತೆಗೆ ತತ್ಸಂಬಂಧವಾದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ತಜ್ಞರು ಕಾನೂನು ಪಂಡಿತರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು.
ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು ಎಂದಿದ್ದ ಅವರು, ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತದೆಯೊ ಅಲ್ಲಿ ಒಂದೆರಡು ವರ್ಷ ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಇಂತಹ ಆಲೋಚನೆ, ಚಿಂತನೆ ಇದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ ಎಂದರು.

