ಸುದ್ದಿ ಸಂಗ್ರಹ ಬೆಂಗಳೂರು
75 ವರ್ಷದ ವೃದ್ಧ ಮತ್ತು ಪಾರ್ಶ್ವವಾಯು ಪೀಡಿತ ತಾಯಿಯನ್ನು ಮಗನೇ ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯ ಕಟ್ಟಡದ 3ನೇ ಮಹಡಿಯಿಂದ ಕೆಳಗೆ ತಳ್ಳಿದ್ದು, ತಕ್ಷಣವೆ ಆಕೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ RR ನಗರದಲ್ಲಿ ನಡೆದಿದೆ.
RR ನಗರದ BMEL ಲೇಔಟ್’ನ 3ನೇ ಹಂತದಲ್ಲಿ ಈ ಘಟನೆ ನಡೆದಿದ್ದು, 75 ವರ್ಷದ ಸಾವಿತ್ರಮ್ಮ ಸಿ ಎಂಬ ವೃದ್ದ ತಾಯಿಯನ್ನು ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿಕೊಳ್ಳುವ ವೆಂಕಟೇಶ್ ತನ್ನ ತಾಯಿಯನ್ನು ನೋಡಿಕೊಳ್ಳುವುದು ಮತ್ತು ಅವರ ಚಿಕಿತ್ಸೆಗೆ ಹಣ ಒದಗಿಸುವುದು ಕಷ್ಟವಾಗುತ್ತಿರುವ ಕಾರಣದಿಂದ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ವೆಂಕಟೇಶ್ ಅವರ ಮನೆ ಮಾಲೀಕ ವಿಕ್ರಮ್ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದು, ಮೇಲಿನ 2 ಮಹಡಿ ಬಾಡಿಗೆ ನೀಡಲಾಗಿದೆ. ಇದರಲ್ಲಿ ವೆಂಕಟೇಶ್ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಅಂದು ವೆಂಕಟೇಶ್ ತನ್ನ ತಾಯಿಯನ್ನು ಎತ್ತಿ ತಾವು ವಾಸಿಸುತ್ತಿದ ಮಹಡಿಗೆ ಹೋಗಿ ಕೆಳಗೆ ಎಸೆದಿದ್ದು, ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ಆ ವೃದ್ದೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಬಳಿಕ ವೆಂಕಟೇಶ್ ಮನೆಗೆ ಹಿಂತಿರುಗಿ ಬಾಗಿಲು ಹಾಕಿಕೊಂಡಿದ್ದಾನೆ.
ಘಟನೆ ನಡೆದ ದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ವೆಂಕಟೇಶ್ ಅವರ ಮನೆ ಮಾಲೀಕ ಇ. ವಿಕ್ರಮ್ ಕಟ್ಟಡದ ಹಿಂಭಾಗದಲ್ಲಿ ಗುಡುಗಿದಂತಹ ದೊಡ್ಡ ಶಬ್ದ ಕೇಳಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ವಿಕ್ರಮ್ ಹೇಳಿಕೆಯ ಆಧಾರದ ಮೇಲೆ, ಆರ್.ಆರ್ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ವೆಂಕಟೇಶ್ ನನ್ನು ಬಂಧಿಸಿದ್ದಾರೆ.
ತಾಯಿಯನ್ನು ಮಗ ಕೊಂದಿದ್ದೇಕೆ ?
ಪೊಲೀಸರ ತನಿಖೆಯಲ್ಲಿ ಈ ಕುರಿತು ಆರೋಪಿ ವಿವರಿಸಿದ್ದು, ಆತನ ತಂದೆ ಸುಮಾರು 10 ವರ್ಷಗಳ ಹಿಂದೆ ನಿಧನರಾಗಿದ್ದು, ಅಂದಿನಿಂದ ಆತ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದು, ಆಕೆ 5 ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಇದರಿಂದ ಆಕೆ ಹಾಸಿಗೆ ಹಿಡಿದಿದ್ದು, ಆಕೆಯನ್ನು ನೋಡಿಕೊಳ್ಳಲು ತಾನು ಕೆಲಸ ಬಿಡುವ ಪರಿಸ್ಥಿತಿ ಬಂದಿದ್ದು, ಆಕೆ ಚೇತರಿಸಿಕೊಳ್ಳುವ ಯಾವುದೆ ಲಕ್ಷಣಗಳು ಕಾಣಲಿಲ್ಲ. ಇದರಿಂದಾಗಿ ಪ್ರತಿದಿನ, ಜೀವನವು ದುಃಖಕರವಾಗುತ್ತಿತ್ತು. ಹಾಗಾಗಿ ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ಕುರಿತು “ಈ ಬಂಧಿತ ಆರೋಪಿ ವಿವಾಹಿತನಾಗಿದ್ದು, ಈತನ ಪತ್ನಿ ಕ್ಲಿನಿಕ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ ಮತ್ತು ವೆಂಕಟೇಶ್ ಶೋರೂಂನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಘಟನೆ ನಡೆದಾಗ ಅವರ ಪತ್ನಿ ಕೆಲಸಕ್ಕೆ ಹೋಗಿದ್ದರು” ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

