Site icon ಸುದ್ದಿ ಸಂಗ್ರಹ

SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: KSRTC ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ

ಸುದ್ದಿ ಸಂಗ್ರಹ ಬೆಂಗಳೂರು
ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಪರೀಕ್ಷೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಹತ್ವದ ಸುದ್ದಿ ನೀಡಿದೆ.

ನಾಳೆ ಮಾರ್ಚ್ 18 ಬುಧವಾರದಿಂದ ಏಪ್ರಿಲ್‌ 02 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.

ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹಾಗೂ ನಿಯೋಜಿತ ಪರೀಕ್ಷಾ ಕೇಂದ್ರದಿಂದ ತಮ್ಮ ವಾಸಸ್ಥಳದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉಚಿತ ಬಸ್‌ ಪ್ರಯಾಣ ಸೌಲಭ್ಯ ಪಡೆಯಬಹುದು.

ಹಾಲ್‌ ಟಿಕೆಟ್‌ ಕಡ್ಡಾಯ
ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ವಾಪಸ್ ಬರುವಾಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆ ಪ್ರವೇಶ ಪತ್ರವನ್ನ (ಹಾಲ್‌ ಟಿಕೆಟ್‌) ಕಡ್ಡಾಯವಾಗಿ ತೋರಿಸಿ ಉಚಿತ ಬಸ್ ಪ್ರಯಾಣ ಸೌಲಭ್ಯ ಪಡೆಯಬಹುದಾಗಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಯಾವ್ಯಾವ ಬಸ್‌ಗಳಲ್ಲಿ ಉಚಿತ ಪ್ರಯಾಣ ?
ಕೆಎಸ್‌ಆರ್‌ಟಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು.

ಬಿಎಂಟಿಸಿನಲ್ಲೂ ಉಚಿತ ಪ್ರಯಾಣ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೆ ಟಿಕೆಟ್‌ ದರವಿಲ್ಲದೆ, ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಸಹ ಅವಕಾಶ ಕಲ್ಪಿಸಿದೆ. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಹಿಂದಿರುಗುವಾಗ ತಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರವೇಶ ಪತ್ರವನ್ನು ಬಿಎಂಟಿಸಿ ಬಸ್ ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಈ ಉಚಿತ ಪ್ರಯಾಣ ಬಿಎಂಟಿಸಿಯ ‘ಸಾಮಾನ್ಯ ಸೇವೆಗಳಿಗೆ’ ಮಾತ್ರ ಅನ್ವಯವಾಗಲಿದೆ. ವೇಗದೂತ ಮತ್ತು ಹವಾನಿಯಂತ್ರಿತ ಬಸ್‌ಗಳಲ್ಲಿ ಈ ಸೌಲಭ್ಯವಿರುವುದಿಲ್ಲ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 18 – ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್ (NCERT), ಇಂಗ್ಲೀಷ್, ಸಂಸ್ಕೃತ)
ಮಾರ್ಚ್ 23 – ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
ಮಾರ್ಚ್ 25 – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
ಮಾರ್ಚ್ 28 – ಗಣಿತ, ಸಮಾಜ ಶಾಸ್ತ್ರ
ಮಾರ್ಚ್ 30 – ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲೀಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ)
ಏಪ್ರಿಲ್ 1 – ಅರ್ಥಶಾಸ್ತ್ರ
ಏಪ್ರಿಲ್ 2 – ಸಮಾಜ ವಿಜ್ಞಾನ

Exit mobile version