ಸುದ್ದಿ ಸಂಗ್ರಹ ಕಲಬುರಗಿ
ವಿಧ್ವಂಸಕ ಕೃತ್ಯ ತಡೆ, ಅಗ್ನಿಶಾಮಕ ಸೇವೆ ಮತ್ತು ವಿವಿಐಪಿ ರಕ್ಷಣೆ ನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಿಐಎಸ್‌ಎಫ್ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ಮಹಾಗಾಂವ ಕ್ರಾಸ್ ಸಮೀಪದ ಸಂಜೀವಿನ ವೃದ್ಧಾಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಿಐಎಸ್‌ಎಫ್ ದಿನಾಚರಣೆ’ಯಲ್ಲಿ ನಿವೃತ್ತ ಸಿಐಎಸ್‌ಎಫ್ ಯೋಧ ಕಾಮಣ್ಣ ಮದಗುಣಕಿ ಅವರನ್ನು ಸತ್ಕರಿಸಲಾಯಿತು, ನಂತರ ಮಾತನಾಡಿದ ಅವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು 1969ರಲ್ಲಿ ಸ್ಥಾಪಿತವಾದ ಪ್ರಮುಖ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ದೇಶದ ನಿರ್ಣಾಯಕ ಮೂಲಸೌಕರ್ಯಗಳಾದ ವಿಮಾನ ನಿಲ್ದಾಣಗಳು, ಅಣು ವಿದ್ಯುತ್ ಸ್ಥಾವರಗಳು, ಬಂದರುಗಳು, ಮೆಟ್ರೋ ರೈಲುಗಳು ಮತ್ತು ಸರ್ಕಾರಿ ಅಥವಾ ಖಾಸಗಿ ಕೈಗಾರಿಕೆಗಳಿಗೆ ಭದ್ರತೆ ಒದಗಿಸುತ್ತದೆ ಎಂದರು.
ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಸಮಾಜದಲ್ಲಿನ ಅನೇಕ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಶಿವಪುತ್ರ ಮಾಲಿ ಪಾಟೀಲ, ಶರಣಮ್ಮ, ರುಕ್ಮಿಣಿ, ಚಂದ್ರಕಲಾ, ಮಹಾದೇವಿ ಸೇರಿದಂತೆ ಅನೇಕರು ಇದ್ದರು.

