Site icon ಸುದ್ದಿ ಸಂಗ್ರಹ

4 ಗಂಟೆಯಲ್ಲಿ 3 ಕಾರ್ಯಕ್ರಮ: ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳಾಪಟ್ಟಿ

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗ​ ಮತ್ತು ಬೆಂಗಳೂರು – ಬೆಳಗಾವಿ ನಡುವಿನ ವಂದೆ ಭಾರತ್​ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದಾರೆ.

ಈ ಕುರಿತು ವೇಳಾಪಟ್ಟಿ ಹಂಚಿಕೊಂಡಿರುವ ಸಿಎಂ ಕಚೇರಿ, ಮೋದಿ ಅವರು 4 ಗಂಟೆಗಳ ಕಾಲ ಇರಲಿದ್ದು, ಈ ವೇಳೆ 3 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಕೆಎಸ್​ಆರ್​ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಲಿದ್ದು, ಅಲ್ಲಿ ಬೆಂಗಳೂರು- ಬೆಳಗಾವಿ ನಡುವೆ ವಂದೆ ಭಾರತ್​ ಟ್ರೈನ್’​​ಗೆ ಚಾಲನೆ ನೀಡಲಿದ್ದಾರೆ. ಇದೆ ವೇಳೆ ವರ್ಚುವಲ್​ ಆಗಿ ಅಮೃತ್​ಸರ್​- ಶ್ರೀ ಮತಾ ವೈಷ್ಣೋದೇವಿ ಕತ್ರಿ ಹಾಗೂ ಅಜ್ನಿ (ನಾಗಪುರ್​)- ಪುಣೆಯ ಮತ್ತೆರಡು ವಂದೆ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಲಿದ್ದಾರೆ.

ಬಳಿಕ ರಸ್ತೆ ಮಾರ್ಗದ ಮೂಲಕ ಆರ್​ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11.45 ರಿಂದ 12.50ರ ನಡುವೆ ಹಳದಿ ಮಾರ್ಗ ಲೋಕಾರ್ಪಣೆ ಮಾಡಿ, ಎಲೆಕ್ಟ್ರಾನಿಕ್​ ಸಿಟಿ ಸ್ಟೇಷನ್​ವರೆಗೆ ಮೆಟ್ರೋ ಪ್ರಯಾಣ ನಡೆಸಲಿದ್ದಾರೆ. 19.15 ಕಿ.ಮೀ ಉದ್ದದ ಆರ್​ವಿ ರಸ್ತೆಯಿಂದ ಬೊಮ್ಮಸಂದ್ರ ಸಾಗಲಿರುವ ಹಳದಿ ಮೆಟ್ರೋ ಮಾರ್ಗದಲ್ಲಿ 16 ಸ್ಟೇಷನ್​ ಬರಲಿದ್ದು, ಇದನ್ನು 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಇದಾದ ಬಳಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಬೆಂಗಳೂರಿಗೆ ಆಗಮಿಸಿಲಿದ್ದು, ಇಲ್ಲಿ ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕು ಸ್ಥಾಪನೆ ನೀಡಲಿದ್ದಾರೆ. ಬಳಿಕ ಹೆಲಿಕಾಪ್ಟರ್​ ಮೂಲಕ ಹೆಚ್​ಎಎಲ್​ಗೆ ತೆರಳಿ, 2.45ಕ್ಕೆ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ. ಮೆಟ್ರೋ 3ಹಂತದ ಯೋಜನೆ ಆರೇಂಜ್​ ಲೈನ್ (ಕಿತ್ತಾಳೆ ಮಾರ್ಗ)​ ಆಗಿದ್ದು, ಇದು 44.65 ಕಿ.ಮೀ ದೂರ ಹೊಂದಿದ್ದು, ಇದನ್ನು ಅಂದಾಜು 15.611 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕೂ ಕೂಡ ಮೋದಿ ಶಂಕು ಸ್ಥಾಪನೆ ನಡೆಸಲಿದ್ದಾರೆ.

ಹಳದಿ ಲೈನ್​ ಮೆಟ್ರೋ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಈ ಮಾರ್ಗದಲ್ಲಿ ಟ್ರಾಫಿಕ್​ ದಟ್ಟಣೆ ಇರಲಿದ್ದು, ಹೊಸೂರು ರಸ್ತೆ, ಸಿಲ್ಕ್​ ಬೋರ್ಡ್​ ಜಂಕ್ಷನ್​ ಮತ್ತು ಎಲೆಕ್ಟ್ರಾನಿಕ್ಸ್​ ಸಿಟಿ ಜಂಕ್ಷನ್​ನಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಉಂಟಾಗಲಿದೆ.

ಮೋದಿ ವೇಳಾಪಟ್ಟಿ

Exit mobile version