Site icon ಸುದ್ದಿ ಸಂಗ್ರಹ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ, ಅಲ್ಲಲ್ಲಿ ಅನಾಹುತ ಸೃಷ್ಟಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರ್ಭಟ ಜೋರಾಗಿದೆ, ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಕೆಲವು ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಚಾಮರಾಜನಗರ, ಮಂಡ್ಯ, ಹಾಸನ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಹನೂರು ಸೇರಿದಂತೆ ಎಲ್ಲೆಡೆ ಭಾರಿ ಮಳೆಯಾಗಿದೆ, ಬಿಳಿಗಿರಿರಂಗನ ಬೆಟ್ಟದಲ್ಲಿ ಸುಂದರ ಲೋಕ ಸೃಷ್ಟಿಯಾಗಿದೆ. ಮಂಡ್ಯ ನಗರದ ಬಿಎಸ್‌ಎನ್‌ಎಲ್ ಕಚೇರಿ ಬಳಿ ರಸ್ತೆಯಲ್ಲಿ ಹೆಚ್ಚು ನೀರು ನಿಂತ ಹಿನ್ನೆಲೆ ಚರಂಡಿಗೆ ಕಾರು ಉರುಳಿ ಬಿದ್ದಿದೆ. ಹಾಸನ ಜಿಲ್ಲೆಯ ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಆಲೂರು ತಾಲೂಕಿನ ಹಲವೆಡೆ ಮಳೆಯಾಗಿದೆ.

ಕೊಪ್ಪಳ ಜಿಲ್ಲೆಯ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ರಾಯಚೂರಿನ ಲಿಂಗಸುಗೂರಿನಲ್ಲಿ 101 ಬಾಗಿಲುಗಳುಳ್ಳ 160 ವರ್ಷದ ಐತಿಹಾಸಿಕ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಜೋರು ಮಳೆಗೆ ಜಿಲ್ಲೆಯ ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮದ ಮುಖ್ಯ ರಸ್ತೆ ಕುಸಿದಿದ್ದು, ಜೀವ ಭಯದಲ್ಲೇ ಪ್ರಯಾಣಿಕರು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಹವಾಮಾನ ಇಲಾಖೆ ಈಗಾಗಲೆ ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನಗಳವರೆಗೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಗುರುವಾರ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

Exit mobile version