Site icon ಸುದ್ದಿ ಸಂಗ್ರಹ

ಹೈಕೋರ್ಟ್​ ಆದೇಶಕ್ಕೆ ಮಣಿದ ಸರ್ಕಾರ: ಐಪಿಎಸ್​ ಅಧಿಕಾರಿ ರೂಪಾಗೆ ಮುಂಬಡ್ತಿ

ಬೆಂಗಳೂರು: ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್​ ಮಹಿಳಾ ಅಧಿಕಾರಿ ಡಿ.ರೂಪಾ ಮೌದ್ಗಿಲ್​ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.

2000ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ರೂಪಾ ಅವರನ್ನು ಐಜಿಪಿಯಿಂದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕಿಯಾಗಿ (ಎಡಿಜಿಪಿ) ಸರ್ಕಾರವು ಮುಂಬಡ್ತಿ ನೀಡಿ, ಈಗ ಇರುವ ಹುದ್ದೆಯಲ್ಲೆ ಮುಂದುವರೆಸಿದೆ.

ಮುಂಬಡ್ತಿ ಸಂಬಂಧ ಡಿ. ರೂಪಾ ಅವರು ಏಪ್ರಿಲ್ 25 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು, “ಮುಂಬಡ್ತಿ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ರೂಪಾ ಅವರಿಗೆ ಸೂಚಿಸಿತ್ತು.​ ಇದೆ ವೇಳೆ ಮನವಿ ಸಂಬಂಧ ಸರ್ಕಾರವು ಎಂಟು ವಾರಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತ್ತು.

ಹೈಕೋರ್ಟ್​ನ ಗಡುವಿಗೆ ಮಣಿದ ಸರ್ಕಾರ ಡಿ. ರೂಪಾ ಅವರಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.ಆದರೆ ಪೊಲೀಸ್ ಇಲಾಖೆಗೆ ಸಂಬಂಧಿಸದ ರೇಷ್ಮೆ ಇಲಾಖೆಯ ಹುದ್ದೆಯಲ್ಲಿಯೆ ಹಿರಿಯ ಐಪಿಎಸ್​ ಅಧಿಕಾರಿಯನ್ನು ಮುಂದುವರೆಸಿದ್ದನ್ನು ನೋಡಿದರೆ ಸರ್ಕಾರದ ನಿರ್ಧಾರದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.

Exit mobile version