ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸ್ವದೇಶಿ ದಿನಾಚರಣೆ ಆಚರಿಸಲಾಯಿತು.
ಸ್ವದೇಶಿ ಚಿಂತಕ ರಾಜೀವ್ ದೀಕ್ಷಿತರ 58ನೇ ಜನ್ಮ ದಿನ, 15ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವದೇಶಿ ದಿನಾಚರಣೆಯನ್ನು ಸೇಡಂ ಓಂ ಶಾಂತಿ ಕೇಂದ್ರದ ಬಿ.ಕೆ ಕಲಾವತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಅವರು, ರಾಜೀವ್ ದೀಕ್ಷಿತ್ ಅವರು ಸ್ವದೇಶಿ ಉಳಿವಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಸಂಕಲ್ಪ ಮತ್ತು ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶರಣರ ಹಿರಿಮೆ ಮರಣದಲ್ಲಿ ನೋಡು ಎನ್ನುವ ಹಾಗೆ ರಾಜೀವ್ ದೀಕ್ಷಿತರು ಬರಿ ಮಾತಿನಲ್ಲಿ, ಬದುಕಿನಲ್ಲಿ ಮಾತ್ರ ಸ್ವದೇಶಿ ಚಿಂತಕನಾಗಿರಲಿಲ್ಲ. ಸಾವಿನ ಮನೆಗೂ ಅದನ್ನು ಜತೆಯಲ್ಲೆ ಕೊಂಡೊಯ್ದಿದ್ದರು. ಅಂತಹ ಸಾಧಕರಿಗೆ ಸಾವಿಲ್ಲ, ಅವರ ಚಿಂತನೆಗಳ ಮೂಲಕ ನಮ್ಮ ಜೊತೆಗೆ ಸದಾ ಜೀವತಂರಾಗಿದ್ದಾರೆ ಎಂದರು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ,
ನಮಗೆಲ್ಲ ರಾಜೀವ್ ದೀಕ್ಷಿತ್ ಎಂದ ತಕ್ಷಣ ಎಲ್ಲರಿಗೂ ನೆನಪಾಗುವದು ಸ್ವದೇಶಿ ಬಚಾವೋ ಆಂದೋಲನ. ದೇಸಿ ಚಿಂತನಗೆ, ಜೀವನ ಶೈಲಿಗೆ ಆಂದೋಲನದ ರೂಪ ಕೊಟ್ಟವರು ದೀಕ್ಷಿತರು ಎಂದರು.
ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅವು ಹೊತ್ತು ತರುತ್ತಿರುವ ವಿದೇಶಿ ಜೀವನ ಶೈಲಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಲಕ್ಷಾಂತರ ತರುಣರ ಪಡೆಯನ್ನು ಕಟ್ಟಿದವರು ಅವರು. ಸ್ವದೇಶಿಯಂದ ತಕ್ಷಣ ಈ ದೇಶದಲ್ಲೆ ತಯಾರಾದ ವಸ್ತುಗಳನ್ನು ಬಳಸೋದು ಎನ್ನುವ ಸೀಮಿತ ಕಲ್ಪನೆ ಬಹಳಷ್ಟು ಮಂದಿಗಿದೆ ಎಂದರು.
ಸ್ವದೇಶಿ ಎಂದರಷ್ಟೇ ಅಲ್ಲ, ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟವರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಗೋವು ಸೇವಕ ಸಚ್ಚಿದಾನಂದ ಆಂಜನೇಯ ರಾಜೀವ್ ದೀಕ್ಷಿತ್ ಅವರು ಹೇಳಿಕೊಟ್ಟ ದಿನನಿತ್ಯದ ಆರೋಗ್ಯ ಸೂತ್ರ ತಿಳಿಸಿದರು.
ವಾಡಿ ಓಂ ಶಾಂತಿ ಕೇಂದ್ರದ ಬಿ.ಕೆ ಮಹಾನಂದ, ಪ್ರೇಮಾವತಿ ಕಾಶೆಟ್ಟಿ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಶಾಂತಾಬಾಯಿ ನರೋಣಾ, ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ, ಕಾಶಿನಾಥ ಶೆಟಗಾರ, ಸತೀಶ ಸಾವಳಗಿ, ಅರುಣ ಪಾಟೀಲ, ಸುಭಾಷ ಬಳಚಡ್ಡಿ, ಸಂತೋಷ ದಹಿಹಂಡೆ, ರಮೇಸ ಕುಮಾರ ಸಿಂಗ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.