ಚಿಕ್ಕೋಡಿ: ಕಾವಿ ಧರಿಸಿದ ಮಠಾಧೀಶರು ಬಸವ ತಾಲಿಬಾನಿಗಳು ಎಂದು ಹೇಳುವ ಮೂಲಕ ಕೊಲ್ಲಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಭಜರಂಗದಳ ಆಯೋಜಿಸಿದ್ದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾಲೆ ಪೊಲೀಸ್ ಇದ್ದಹಾಗೆ, ನಮ್ಮನ್ನು ಕೆಟ್ಟ ಕೆಲಸ ಮಾಡಲು ಬಿಡುವುದಿಲ್ಲ. ಏನಾದರೂ ತಪ್ಪು ಕೆಲಸ ಮಾಡಲು ಹೊರಟರೆ, ಅದು ನಮ್ಮನ್ನು ತಡೆಯುತ್ತೆ. ನಮ್ಮಲ್ಲಿ ಪಂಡರಾಪುರಕ್ಕೆ ಹೋಗುವವರು ಮಾಲೆ ಹಾಕಿಕೊಳ್ಳುತ್ತಾರೆ. ಯಾರಾದರು ಮದ್ಯದಂಗಡಿ ಕಡೆ ಹೊರಟರೆ, ಕೊರಳಿನಲ್ಲಿರುವ ಪೊಲೀಸ್ ನಮ್ಮನ್ನು ತಡೆಯುತ್ತೆ. ಮತ್ತೆ ಯಾರಾದರೂ ಅಡ್ಡೆಗೆ ಹೊರಟಿದರೆ, ನಾನು ಕೊರಳಲ್ಲಿ ಇದ್ದೆನೆ. ಬಾ ಈ ಕಡೆ ಎಂದು ಕರೆಯುತ್ತೆ. ಈ ಮಾಲೆ ಮಾತನಾಡುವುದಿಲ್ಲ. ಹನುಮ ಮಾಲೆಯ ಕುರಿತು ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರು ಹಾಗೂ ನಮ್ಮಂಥ ಕಾವಿ ಬಟ್ಟೆ ಧರಿಸಿರುವ ಬಸವ ತಾಲಿಬಾನಿಗಳು ಮಾಲೆ ಬಗ್ಗೆ ಟೀಕೆ ಮಾಡಬಹುದು ಎಂದು ಲಿಂಗಾಯತ ಸ್ವಾಮಿಜಿಗಳ ವಿರುದ್ಧ ವಿವಾದಾತ್ಮಕ ಪದ ಬಳಕೆ ಮಾಡಿದ್ದಾರೆ.
ಕೈಯಲ್ಲಿ ಬಡಗಿ ಹಿಡಿದು ಅಡ್ಡಾಡಿದ್ದನ್ನು ವಿರೋಧ ಮಾಡುತ್ತಾರೆ. ಬಡಗಿ ಬದಲು ಏನು ಆರತಿ ತಟ್ಟೆ ಹಿಡಿದುಕೊಳ್ಳಬೇಕಾ ? ಹುಡುಗಿಯರನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಅಂಥವರನ್ನು ಹಿಡಿದುಕೊಂಡು ಬಂದು ತಿಳಿಯುವ ಭಾಷೆಯಲ್ಲಿ ಹೇಳಬೇಕು. ಸನ್ಯಾಸಿಯಾಗಿ ಗಡ್ಡ ಬಿಡುತ್ತಿದ್ದರು. ನಾನು ತಿಳಿ ಹೇಳಿದ ಮೇಲೆ ತಲೆ ಬೋಳಿಸಿಕೊಂಡು ಪೇಟಾ ಸುತ್ತುತ್ತಿದ್ದಾರೆ. ರಾತ್ರಿ ಟೀ ಶರ್ಟ್, ಬರ್ಮೋಡ ಹಾಕೋದು, ಹೋಟೆಲ್, ಬಾರ್ಗೆ ಹೋಗೋದು ಅಂತವರಿಗೆ ಮಠ ಏಕೆ ? ಮಠಗಳನ್ನು ಏಕೆ ಹಾಳು ಮಾಡ್ತಾ ಇದ್ದಿರಿ ? ಇಂಥವರಿಗೆ ಸನ್ಯಾಸತ್ವ ಯಾಕೆ ಬೇಕು ? ಹೀಗಿದ್ದರೆ ಮಠ ಬಿಟ್ಟು ಹೋಗಿ ಎಂದು ಸ್ವಾಮಿಜಿಗಳ ಕುರಿತು ಹರಿಹಾಯ್ದಿದ್ದಾರೆ.
ಇದಕ್ಕೂ ಮುನ್ನ ಬಹಳಷ್ಟು ಸಂಪ್ರದಾಯಗಳ ಬಗ್ಗೆ ಕನ್ನೇರಿ ಶ್ರೀ ಟೀಕೆ ಮಾಡಿದ್ದಕ್ಕೆ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವೇಶ ನಿರ್ಬಂಧಿಸಿದ್ದರು.