ಚಿತ್ತಾಪುರ: ರಾಜ್ಯದ ಗಮನ ಸೆಳೆದಿರುವ ಭೀಮನಡೆ
ಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳು ಬಳಸುವ ಧ್ವಜದ ಬಣ್ಣಗಳ ಬಾವುಟಗಳು, ಬಂಟಿಂಗ್ಸ್’ಗಳು, ಬ್ಯಾನರ್’ಗಳು ಹಾಗೂ ಪ್ಲೇಕ್ಸ್’ಗಳು ರಾರಾಜಿಸುತ್ತಿವೆ.
ಸಂವಿಧಾನ ಪೀಠಿಕೆಯೊಂದಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ್, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಮಹಾವೀರ, ನುಲಿಯ ಚಂದಯ್ಯ ಸೇರಿದಂತೆ ವಿವಿಧ ಸಮುದಾಯಗಳ ಶರಣರ ಭಾವಚಿತ್ರಗಳ ಕಟೌಟ್’ಗಳು ಪಟ್ಟಣದ ಪ್ರಮುಖ ರಸ್ತೆ ಹಾಗೂ ವಿವಿಧೆಡೆ ಅಳವಡಿಸಲಾಗಿದೆ.
ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಬೆಳಗ್ಗೆ 11ಕ್ಕೆ ಭೀಮ ನಡಿಗೆ ಅದ್ದೂರಿ ಮೆರವಣಿಗೆ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾಗಿ ಕಪಡಾ ಬಜಾರ್, ಕಿರಾಣಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಲಿದೆ. ಮಧ್ಯಾಹ್ನ 1 ಘಂಟೆಗೆ ಬಹಿರಂಗ ಸಭೆ ನಡೆಯಲಿದೆ.
ಭೀಮನಡೆ ಪಥ ಸಂಚಲನದಲ್ಲಿ ನೀಲಿ ಟೋಪಿ, ಬಿಳಿ ಅಂಗಿ
ಹಾಗೂ ಖಾಕಿ ಪ್ಯಾಂಟ್ ಧರಿಸಿದ ನಾಲ್ಕು ನೂರು ಕಾರ್ಯಕರ್ತರು ಶಿಸ್ತು ಬದ್ಧವಾಗಿ ಪಥ ಸಂಚಲನ ನಡೆಸಲಿದ್ದಾರೆ.
ಬಹಿರಂಗ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೌಟಾ ಬಿ ಗ್ರಾಮದ ಸಿದ್ಧರಾಮ ಶರಣರು ಬೆಲ್ದಾಳ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಸಮಾಜಗಳ ಅಧ್ಯಕ್ಷರು, ಮುಖಂಡರು ಸೇರಿದಂತೆ ಅಂದಾಜು 5 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಥಸಂಚಲನದ ವೇಳೆ ಯಾವುದೆ ರೀತಿಯ ತೊಂದರೆ ಹಾಗೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.