ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ಸಮೇತ ಕೆರೆಗೆ ಬಿದ್ದ ಲಾರಿ

ರಾಜ್ಯ

ಆನೇಕಲ್: ರಸ್ತೆಗುಂಡಿ ತಪ್ಪಿಸಲು ಹೋಗಿ ಜಲ್ಲಿ ತುಂಬಿದ್ದ ಲಾರಿಯೊಂದು ಚಾಲಕನ ಸಮೇತ ಕೆರೆಗೆ ಬಿದ್ದಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಿದರಗುಪ್ಪೆ ಕೆರೆಯಲ್ಲಿ ಘಟನೆ ಸಂಭವಿಸಿದೆ. ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಕೆರೆಯಲ್ಲಿ ಮುಳುಗಿರುವ ಸಾಧ್ಯತೆಯಿದೆ. ಜಲ್ಲಿ ತುಂಬಿಕೊಂಡು ಬಂದಿದ್ದ 12 ಚಕ್ರದ ಲಾರಿ ಕಳೆದ ರಾತ್ರಿ 11:30ರ ಸುಮಾರಿಗೆ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ ಹೋಗುತ್ತಿದ್ದ ಲಾರಿ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಚಾಲಕನ ಸಮೇತವಾಗಿ ಕೆರೆಗೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೆರೆ ಏರಿ ಮೇಲೆ ರಸ್ತೆ ಬಹಳ ಕಿರಿದಾಗಿದೆ. ರಾಜ್ಯ ಹೆದ್ದಾರಿ ರಸ್ತೆಯ ಅವ್ಯವಸ್ಥೆಯಿಂದ ಅಪಘಾತಗಳು ಹೆಚ್ಚಾಗಿವೆ. ಆರ್‌ಎನ್‌ಎಸ್ ಕಾಂಟ್ರಾಕ್ಟರ್‌ಗೆ ರಸ್ತೆ ಅಭಿವೃದ್ಧಿಗೆ ಟೆಂಡರ್ ನೀಡಲಾಗಿದೆ. ಆದರೆ ಕೆರೆ ಏರಿ ಮೇಲಿನ ರಸ್ತೆ ಅಗಲೀಕರಣ ಮಾಡದೆ ಅವ್ಯವಸ್ಥೆಯುಂಟಾಗಿದೆ. ಈ ಕಿರಿದಾದ ರಸ್ತೆ ಹಳ್ಳಗುಂಡಿಗಳಿಂದ ಕೂಡಿದೆ. ಕಳೆದೊಂದು ವರ್ಷದ ಹಿಂದೆ ಇದೆ ಜಾಗದಲ್ಲಿ ಬಸ್ ಉರುಳಿ ಬಿದ್ದಿತ್ತು. 18 ಜನ ಓಂ ಶಕ್ತಿ ಮಾಲಾಧಾರಿಗಳು ಗಾಯಗೊಂಡಿದ್ದರು. ಈಗ ಮತ್ತೊಂದು ಅವಘಡ ಸಂಭವಿಸಿ ಚಾಲಕನ ಸಮೇತವಾಗಿ ಕೆರೆಗೆ ಲಾರಿ ಬಿದ್ದಿದೆ. ಸದ್ಯ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡ ಮತ್ತು ಪೊಲೀಸರು ಆಗಮಿಸಿದ್ದು, ಕ್ರೇನ್ ಬಳಸಿ ಲಾರಿ ಮೇಲೆತ್ತಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *