ಪಾರಂಪರಿಕ ಸ್ಥಳಗಳಿಂದ ಇತಿಹಾಸ, ಸಂಸ್ಕೃತಿ ಉಳಿಯಲು ಸಾಧ್ಯ: ಮುಡಬಿ ಗುಂಡೇರಾವ

ಜಿಲ್ಲೆ

ಕಲಬುರಗಿ: ನಮ್ಮ ಜಿಲ್ಲೆ ಸೇರಿದಂತೆ ದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿದ್ದು ಅವುಗಳನ್ನು ಉಳಿಸಿ, ಸಂರಕ್ಷಿಸಿ, ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಮತಟಪಟ್ಟರು.

ನಗರದ ಬಹುಮನಿ ಕೋಟೆಯ ಆವರಣದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಿದ್ದ ‘ವಿಶ್ವ ಪರಂಪರೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಜಾಮಿಯಾ ಮಸೀದಿಯು ಏಷ್ಯಾ ಖಂಡದಲ್ಲಿನ ದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಇದು ಇಂಡೊ-ಸಾರ್ಸನಿಕ (ಪರ್ಷಿಯನ್) ವಾಸ್ತುಶಿಲ್ಪ ಶೈಲಿಯಲ್ಲಿದೆ. ಬಹುಮನಿಯರ ಕಾಲದ ರಾಜಧಾನಿಯಾಗಿತ್ತು. ಅಪರೂಪದ ವಾಸ್ತುಶಿಲ್ಪ, ದೊಡ್ಡದಾದ ತೋಪು ಹೊಂದಿದೆ. ಬಹುಮನಿಯರು ಇನ್ನೂರಕ್ಕು ಹೆಚ್ಚು ವರ್ಷ ಕಾಲ ಈ ಭಾಗದಲ್ಲಿ ಕಲೆ, ಸಾಹಿತ್ಯ, ಪರಂಪರೆ ಸಂರಕ್ಷಿಸಿದರು. ಅವರ ಅವಧಿಯಲ್ಲಿಯೇ ಸೂಫಿ ಸಂತ ಖಾಜಾ ಬಂದೆ ನವಾಜರು ತಮ್ಮ ಸಂದೇಶದ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಕಲಬುರಗಿಯನ್ನು ಭಾವೈಕ್ಯತೆಯ ನೆಲವನ್ನಾಗಿಸಿದ್ದಾರೆ. ಶಹಾಬಜಾರ, ಶೇಖರೋಜಾ, ತಾಜ್ ಸುಲ್ತಾನಪುರ, ಹೀರಾಪುರ, ಹೊಳಕುಂದಾ, ಸೋರ್ ಗುಂಬಜ್ ಮುಂತಾದ ಸ್ಥಳ ನಾಮಗಳು ಮತ್ತು ಸ್ಮಾರಕಗಳು ಬಹುಮನಿಯರ ಕಾಲದ ಇತಿಹಾಸವನ್ನು ಸಾರುತ್ತದೆ ಎಂದರು.

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಬೇಕು. ಭವ್ಯವಾದ ಅನೇಕ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದ್ದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜಶೇಖರ ಪೂಜಾರಿ, ಬಬ್ಲು ರಾಠೋಡ, ಅಲ್ತಾಫ್, ರವಿಕಾಂತ ಮುಲಗೆ, ಪ್ರಜ್ವಲ ಪಾಟೀಲ್, ಇಮ್ರಾನ್, ಅಸವದ್, ಜಪರಖಾನ್, ಪ್ರೇಮ, ಮಕದುಮ್ ಪಟೇಲ್ ಸೇರಿದಂತೆ ಮುಂತಾದವರು ಇದ್ದರು‌.

Leave a Reply

Your email address will not be published. Required fields are marked *