ಗ್ರಂಥಾಲಯಗಳು ಜೀವಂತ ದೇವಾಲಯಗಳು

ಜಿಲ್ಲೆ

ಕಲಬುರಗಿ: ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ನೀಡುವ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಜೀವಂತ ದೇವಾಲಯ ಮತ್ತು ಬದುಕನ್ನು ಸುಂದರಗೊಳಿಸುವ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು.

ಸುಂಟನೂರ ಗ್ರಾಮದ ಅರಿವು ಕೇಂದ್ರವಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ ಗ್ರಂಥಾಲಯ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕಗಳು, ದಿನ ಪತ್ರಿಕೆಗಳು ಓದುವ ಹವ್ಯಾಸ ಮೂಡಿಸುವಲ್ಲಿ ಗ್ರಂಥಾಲಯಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ವಿಶ್ವದ ಮಹಾನ ವ್ಯಕ್ತಿಗಳ ಜೀವನವನ್ನು ನಾವು ಗಮನಿಸಿದಾಗ, ಅವರೆಲ್ಲರೂ ಬಾಲ್ಯದಿಂದಲೇ ಶ್ರೇಷ್ಠ ಗ್ರಂಥಗಳ ಅಧ್ಯಯನ ಮಾಡಿದ್ದು ಕಂಡು ಬರುತ್ತದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು. ಗ್ರಂಥಾಲಯ ವಿಜ್ಞಾನಕ್ಕೆ ಡಾ.ಎಸ್.ಆರ್ ರಂಗನಾಥನ್‌ರ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಗ್ರಾಮದ ಯುವ ಮುಖಂಡ ಶಂಕರ ಹುಲಮನಿ, ಗ್ರಂಥಪಾಲಕ ಚಂದ್ರಕಾಂತ ನಿಲೂರ, ಪ್ರಮುಖರಾದ ಸಿದ್ದಾರೂಢ ಪಟ್ಟಣ, ಅನಿಲ್ ಕುಂಬಾರ, ಹಣಮಂತ ಹುಲಮನಿ, ವಿಠಲ ಜಮಾದಾರ, ರವೀಂದ್ರ ಜೋಳದ, ಜಗನಾಥ ಹುಲಮನಿ, ಅಶೋಕ ಟೆಂಗಳಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *