ಕಲಬುರಗಿ: ತತ್ವಪದಕಾರ ಕಡಿಕೋಳ ಮಡಿವಾಳಪ್ಪನವರು ಬಿದನೂರಲ್ಲಿ ಜನಿಸಿ, ಚಿಣಮಗೇರಾದಲ್ಲಿ ತತ್ವಪದ ರಚಿಸಿ, ಕಡಕೋಳದಲ್ಲಿ ನೆಲೆನಿಂತು ತತ್ವ ಪದಗಳ ಶಿಖರವಾಗಿದ್ದಾರೆ. ಅವರು ಸಗರ ನಾಡಿನ ಅನರ್ಘ್ಯ ರತ್ನವಾಗಿದ್ದಾರೆ ಎಂದು ಸಂಶೋಧಕ ಸಾಹಿತಿ-ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಅಫಜಲಪುರ ತಾಲೂಕಿನ ಬಿದನೂರು ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-23ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಡಿಕೋಳ ಮಡಿವಾಳಪ್ಪನವರು ಸಾವಿರಾರು ತತ್ವಪದಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿ ಗ್ರಾಮದ ಭಜನಾ ಕಲಾವಿದರು ಮಡಿವಾಳಪ್ಪನವರ ತತ್ವಪದಗಳನ್ನೇ ಗಾಯನ ಮಾಡುವುದು ಜನಜನಿತವಾಗಿದೆ. ‘ಯಾಕ ಚಿಂತಿ ಮಾಡ್ತಿದಿ ಎಲೆ ಮನವೇ’ ಎಂದು ಪ್ರಶ್ನಿಸುವ ಮೂಲಕ ಜಾಗೃತಿ ಮೂಡಿಸುತ್ತಾರೆ. ‘ಕೇಳೋ ಜಾಣ ಜ್ಞಾನದಿಂದ ಶಿವಧ್ಯಾನವ ಮಾಡಣ್ಣ’ ಎಂದು ಭಕ್ತಿಯ ಪರಾಕಾಷ್ಠತೆ ಸಾದರಪಡಿಸಿದ್ದಾರೆ. ‘ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೊ’, ಸೇರಿದಂತೆ ಮುಂತಾದ ಮೌಲಿಕ ತತ್ವ ಪದಗಳನ್ನು ನೀಡಿದ ಹೆಗ್ಗಳಿಗೆ ಕಡಿಕೋಳ ಮಡಿವಾಳಪ್ಪನವರಿಗೆ ಸಲ್ಲುತ್ತದೆ. ತತ್ವಪದಗಳ ಮೂಲಕ ಸಮಾಜ ಪರಿವರ್ತನೆ ಮಾಡಲು ಶ್ರಮಿಸಿದ ಮಡಿವಾಳಪ್ಪನವರು ಕರುನಾಡಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಕಡಿಕೋಳ ಮಡಿವಾಳಪ್ಪನವರು ನಮ್ಮ ನೆಲದ ಮಹಾನ ತತ್ವಪದಕಾರರು. ಅವರ ತತ್ವಪದಗಳ ಮೇಲೆ ಹಲವಾರು ಪಿ.ಎಚ್‌ಡಿ ಪ್ರಬಂಧ ಮಂಡಿಸಲಾಗಿದೆ. ಮಡಿವಾಳಪ್ಪನವರ ಸಾಹಿತ್ಯವು ಭಾರತದ ನಾನಾ ಭಾಗಗಳಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಉತ್ತರ ಭಾರತದ ಕಬೀರದಾಸರಂತೆ ದಕ್ಷಿಣ ಭಾರತದಲ್ಲಿ ತತ್ವಪದ ಸಾಹಿತ್ಯದಲ್ಲಿ ಮಡಿವಾಳಪ್ಪನವರು ದೊಡ್ಡ ಕ್ರಾಂತಿ ಮಾಡಿದವರು. ಅವರ ಸಾಹಿತ್ಯ ದೇಶವ್ಯಾಪಿ ಪ್ರಚಾರವಾಗಬೇಕು, ರಾಷ್ಟದ ವಿವಿಧ ವಿಶ್ವವಿದ್ಯಾಲಯ ಅಧ್ಯಯನ ನಡೆಸುವ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಮಡಿವಾಳಪ್ಪನವರು ನಡೆದಾಡಿದ ಬಿದನೂರು, ಚಿನ್ಮಯಗಿರಿ, ಕಡಿಕೋಳ ಕನ್ನಡಿಗರಿಗೆ ಪವಿತ್ರ ಸ್ಥಳಗಳಾಗಿವೆ.
ಮುಡುಬಿ ಗುಂಡೇರಾವ
ಸಂಶೋಧಕ-ಸಾಹಿತಿ, ಸೇಡಂ
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಗ್ರಾಮಸ್ಥರಾದ ಈರಯ್ಯ ಗುತ್ತೇದಾರ, ಶ್ರೀಮಂತ ಗರೂರ್, ಸುಭಾಷ್ಚಂದ್ರ ಡೋಗ್ರಿ, ಶರಣಯ್ಯ ಹಿರೇಮಠ, ಯಲ್ಲಾಲಿಂಗ ಡೋಗ್ರಿ, ಶಿವಲಿಂಗಪ್ಪ ಜಂಬಳ್ಳಿ, ಹಣಮಂತ ಜೋಗೂರ್, ಶಿವಶರಣಪ್ಪ ಹಡಪದ, ಅಂಬಾರಾವ ಪಾಟೀಲ್, ಕಲ್ಯಾಣಿ ಹಡಪದ, ಬಾಪುರಾವ ಪಾಟೀಲ್ ಸೇರಿದಂತೆ ಅನೇಕರು ಇದ್ದರು.