Site icon ಸುದ್ದಿ ಸಂಗ್ರಹ

ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಬಸವಣ್ಣ: ಡಾ.ಭಾಗಿರತಿ ಎಚ್

ಸುದ್ದಿ ಸಂಗ್ರಹ ಕಲಬುರಗಿ
ವಿಶ್ವಗುರು ಬಸವಣ್ಣನವರು 800 ವರ್ಷಗಳ ಹಿಂದೆಯೇ ಅನುಭವ ಮಂಟಪ ಸ್ಥಾಪಿಸಿ, ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ, ಹಕ್ಕುಗಳು, ಆತ್ಮಗೌರವ ನೀಡುವುದು, ಲಿಂಗ ಸಮಾನತೆ, ಜಾತಿ ಪದ್ಧತಿಯ ನಿರ್ಮೂಲನೆಯಂತಹ ಕ್ರಾಂತಿಕಾರಕ ಕಾರ್ಯಗಳನ್ನು ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ ಎಂದು ಪ್ರಗತಿಪರ ಮಹಿಳಾ ಚಿಂತಕಿ ಡಾ.ಭಾಗಿರತಿ ಎಚ್ ಗುಡ್ಡೆವಾಡಿ  ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ಶಾರದಾ ವಿವೇಕ ಮಹಿಳಾ‌ ಪದವಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-3ರಲ್ಲಿ “ಬಸವಣ್ಣ ಮತ್ತು ಮಹಿಳಾ ಸಬಲೀಕರಣ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ, ಮಾತನಾಡಿದರು.

ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಮಹಿಳಾ ಸಮಾನತೆಗಾಗಿ ಮನೆ ಬಿಟ್ಟು ಬಂದ ಜಗತ್ತಿನ ಏಕೈಕ ವ್ಯಕ್ತಿ ಬಸವಣ್ಣ. ಮಹಿಳಾ ಸಬಲೀಕರಣಕ್ಕೆ ಬಸವಣ್ಣನವರು ನೀಡಿದ ಕೊಡುಗೆ ಇಡಿ ಜಗತ್ತಿನಲ್ಲೆ ಪ್ರಮುಖವಾಗಿದೆ. ಪುರುಷ ಪ್ರಧಾನ ಸಮಾಜ, ಜಾತಿ ವ್ಯವಸ್ಥೆ, ಅಬಲೆ, ಹೆಣ್ಣು ಮೌಲಿಗೆ, ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಬೇಕು, ದೇವದಾಸಿ ಪದ್ದತಿಯಂತಹ  ಸಂಕೋಲೆಯಲ್ಲಿ ಸಿಲುಕಿದ್ದ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿ, ಮಹಿಳಾ ಲೋಕ ಎಂದಿಗೂ ಮರೆಯದ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಹಣಮಂತರಾಯ ಗುಡ್ಡೆವಾಡಿ, ಉಪನ್ಯಾಸಕರಾದ ಮಹಾದೇವಿ ಕಲ್ಲಾ, ಶರಣಕುಮಾರ ನಿಂಬರ್ಗಾ, ಶಿಕ್ಷಕ ಅಶೋಕ ನಾಟಿಕಾರ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Exit mobile version