Site icon ಸುದ್ದಿ ಸಂಗ್ರಹ

ಸಾಂಸ್ಕೃತಿಕ ನಾಯಕ ಬಸವಣ್ಣನವರ ಕೊಡುಗೆ ಅವಿಸ್ಮರಣೀಯ

ಸುದ್ದಿ ಸಂಗ್ರಹ ಕಲಬುರಗಿ
ಸಮಾನತೆ, ಕಾಯಕ ತತ್ವ, ಸ್ತ್ರೀ ಸಮಾನತೆ ಮತ್ತು ಜಾತಿ ರಹಿತ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣನವರ ತತ್ವಗಳು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅಡಿಪಾಯವಾಗಿದೆ. ಈ ಘೋಷಣೆಯು ಅವರ ಸಾಮಾಜಿಕ ನ್ಯಾಯದ ಹರಿಕಾರರ ಪಾತ್ರ ಗೌರವಿಸುತ್ತದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.

ಕಾಳಗಿ ತಾಲೂಕಿನ ಕೋರವಾರದ ಅಣವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವದ ನಿಮಿತ್ಯ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ “ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಸಮಾಜ ಸುಧಾರಕ, ವಚನಕಾರ ಮತ್ತು ಮಾನವತಾವಾದಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರವು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ನಾಗೇಂದ್ರಪ್ಪ ಮೋಘಾ ಮಾತನಾಡಿ, ಬಸವೇಶ್ವರರ ತತ್ವ, ಕೊಡುಗೆಯನ್ನು ವಿದ್ಯಾರ್ಥಿ ದಿಸೆಯಿಂದಲೆ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ವಿಶ್ವಗುರು ಬಸವಣ್ಣನವರು ಜಗತ್ತಿನ ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸಿದವರು. ಸರ್ವರಿಗೂ ಸಮಬಾಳು, ಸಮಪಾಲು ತತ್ವದಡಿಯಲ್ಲಿ ಅನುಭವ ಮಂಟಪ ಸ್ಥಾಪಿಸಿ, ಎಲ್ಲಾ ನ್ಯಾಯಗಳನ್ನು ಒದಗಿಸಿದ್ದಾರೆ. ಬಸವಾದಿ ಶರಣರ ತತ್ವ, ವಚನಗಳನ್ನು ಎಲ್ಲೆಡೆ ಪಸರಿಸಲು ನಮ್ಮ ಬಳಗ ಬಸವ ಜಯಂತಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕ ಬಾಬುರಾವ ಪೂಜಾರಿ, ಶಿಕ್ಷಕರಾದ ಮಲ್ಲಿಕಾರ್ಜುನ ಹೆಳವರ, ಸಿದ್ದಾರ್ಥ, ನೀಲಕಂಠ ಪಾಟೀಲ, ಶಂಕರ, ಗೋವಿಂದ, ಶೇಖರ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version